

ಹಳಿಯಾಳ: ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಮಹಿಳೆಯರ ಪ್ರಮಾಣ ಶೇ.55 ರಷ್ಟಿದೆ. ಸ್ತ್ರೀಚೇತನ ಅಭಿಯಾನ ಮೂಲಕ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯೋಜನೆಯ ಲಾಭ ಪಡೆಯಬೇಕು ಎಂದು ತಾಪಂ ನರೇಗಾ ಸಹಾಯಕ ನಿರ್ದೇಶಕಿ ಅನುಪಮಾ ಬೆನ್ನೂರ ಹೇಳಿದರು.
ತಾಲೂಕಿನ ಹವಗಿ ಗ್ರಾಮದಲ್ಲಿ ಬುಧವಾರ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 2024-25ನೇ ಸಾಲಿನಲ್ಲಿ ತಾಲೂಕು ಶೇ.100ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದ್ದು, ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಶೇ.55 ರಷ್ಟಿದೆ. ಇನ್ನೂ ಅರ್ಧಕ್ಕಿಂತ ಹೆಚ್ಚು ಗ್ರಾಮ ಪಂಚಾಯಿತಿಗಳು ಶೇ.50ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿವೆ. ಇಂತಹ ಕಡೆಗಳಲ್ಲಿ ಅಭಿಯಾನದ ಮೂಲಕ ಪ್ರಗತಿ ಸಾಧಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಏ.1ರಿಂದ ನರೇಗಾ ಕೂಲಿ 370 ರೂ. ಆಗಿದ್ದು, ಕೂಲಿಕಾರರು ಹೆಚ್ಚೆಚ್ಚು ಕೆಲಸಕ್ಕೆ ಬರುವಂತೆ ಪ್ರೇರೇಪಿಸಲು ಸಹಾಯಕವಾಗಿದೆ. ಯೋಜನೆಯಡಿ 65 ವರ್ಷ ಮೇಲ್ಪಟ್ಟ ವೃದ್ಧರಿಗೆ, ಅಂಗವಿಕಲರಿಗೆ ಹಾಗೂ ಗರ್ಭಿಣಿಯರಿಗೆ ಅರ್ಧ ಕೆಲಸ ಪೂರ್ತಿ ಕೂಲಿ ನೀಡುವುದರಿಂದ ಎಲ್ಲ ವರ್ಗದ, ವಯಸ್ಸಿನ ಜನರಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ವಿವರಿಸಿದರು.
ಐಇಸಿ ಸಂಯೋಜಕಿ ಸೌಂದರ್ಯ ಕುರಕುರಿ, ಸೇವಂತಿ ಕಮ್ಮಾರ, ಡಿಇಒ ಪ್ರವೀಣ ಇತರರು ಇದ್ದರು.