

ಮಡಿಕೇರಿ: ಕನ್ನಡದ ಮೂಲ ನೆಲೆಯಾಗಿರುವ ಕರ್ನಾಟಕದಲ್ಲಿ ಕನ್ನಡ ಪುಸ್ತಕಗಳು ಬೇಡಿಕೆ ಹೆಚ್ಚುವುದರ ಜತೆಗೆ ಓದುಗರ ಸಂಖ್ಯೆಯೂ ಅಧಿಕವಾಗಬೇಕು ಎಂದು ಬೆಂಗಳೂರು ವೀರಲೋಕ ಪ್ರಕಾಶನದ ಅಧ್ಯಕ್ಷ ವೀರಕ ಪುತ್ರ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರು ವೀರಲೋಕ ಪ್ರಕಾಶನ, ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿರುವ ದೇಸಿ ಜಗಲಿ ಕಥಾ ಕಮ್ಮಟವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಏಳು ಕೋಟಿ ಕನ್ನಡಿಗರಿದ್ದಾರೆ, ಆದರೆ, ಐವತ್ತು ಕನ್ನಡ ಪುಸ್ತಕಗಳನ್ನು ಕೊಂಡು ಓದುವಂತಾಗಬೇಕು ಕನ್ನಡ ಸಾಹಿತ್ಯ ಹಾಗೂ ಸಾಹಿತಿಗಳಿಗೆ ಸೂಕ್ತ ಪ್ರೋತ್ಸಾಹ ದೊರೆಯಬೇಕು. ವೀರಲೋಕ ಪ್ರಕಾಶನ ಕನ್ನಡ ಬರಹಗಾರರ ಪುಸ್ತಕಗಳನ್ನು ಹೊರತರಲು ಮುಂದಾಗುವುದರೊಂದಿಗೆ ಪುಸ್ತಕಗಳಿಗೆ ಸೂಕ್ತ ಮಾರುಕಟ್ಟೆ ದೊರೆಯುವಂತೆ ಮಾಡಲು ತೊಡಗಿಸಿಕೊಳ್ಳಲಾಗಿದ್ದು, ಕನ್ನಡ ಬರಹಗಾರರನ್ನೂ ಮೇಲೆತ್ತುವ ಪ್ರಯತ್ನಕ್ಕೆ ಮುಂದಾಗಲಾಗಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ೩೦೦ ಕಡೆಗಳಲ್ಲಿ ಪುಸ್ತಕ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ. ಮೊಬೈಲ್ ಮೂಲಕ ಜನರಿಗೆ ವಿವಿಧ ಉತ್ಪನ್ನಗಳ ಮಾಹಿತಿ ನೀಡುವಂತೆ ಕನ್ನಡ ಪುಸ್ತಕಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಕನ್ನಡ ಸಾಹಿತ್ಯದ ಬೆಳವಣಿಗೆಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಥಾ ಕಮ್ಮಟಗಳನ್ನು ಆಯೋಜಿಸಲಾಗುತ್ತಿದ್ದು, ಕೊಡಗಿನಲ್ಲಿ ಆಯೋಜನೆಗೊಂಡಿರುವ ಈ ಕಥಾ ಕಮ್ಮಟ ೧೫ನೇ ಕಾರ್ಯಕ್ರಮವಾಗಿದೆ. ಮಕ್ಕಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದ ಶ್ರೀನಿವಾಸ್ ಪುಸ್ತಕಗಳನ್ನು ಓದುವುದರಿಂದ ಬದುಕಿನಲ್ಲಿ ಬದಲಾವಣೆ ಸಾಧ್ಯ ಎಂದು ನುಡಿದರು.
ಲೇಖಕ, ಚಿಂತಕರಾದ ಡಾ.ಮೋಹನ್ ಪಾಳೇಗಾರ್ ಮಾತನಾಡಿ, ಪ್ರಸ್ತುತ ಕಾಲ ಘಟ್ಟದಲ್ಲಿ ಮಕ್ಕಳಲ್ಲಿ ಏಕಾಗ್ರತೆ ಎಂಬುದು ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಏಕಾಗ್ರತೆಯನ್ನು ಕಲಿಸುವ ನಿಟ್ಟಿನಲ್ಲಿ ಇಂತಹ ಕಮ್ಮಟಗಳು ಸಹಕಾರಿಯಾಗಲಿವೆ. ನಿರಂತರವಾಗಿ ಬರೆಯುವುದರಿಂದ ಬರವಣಿಗೆ ಉತ್ತಮಗೊಳ್ಳುತ್ತದೆ ಎಂದು ನುಡಿದ ಅವರು, ನಿರಂತರವಾಗಿ ಓದುವುದರಿಂದ ಜ್ಞಾನ ವೃದ್ಧಿ ಸಾಧ್ಯವಾಗುತ್ತದೆ. ಜಾನಪದ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಅದನ್ನು ಎಂದಿಗೂ ಬಿಡಬಾರದು. ಜಾನಪದವನ್ನು ಮರೆತರೆ ಬದುಕು ನಶ್ವರವಾದಂತೆ ಎಂದು ಎಚ್ಚರಿಸಿದ ಮೋಹನ್ ಪಾಳೇಗಾರ್, ಮರೆಯಾಗುತ್ತಿರುವ ಸಂಸ್ಕೃತಿ ಸಂಪ್ರದಾಯದ ಬಗ್ಗೆ ಜಾಗೃತಿ ಮೂಡಿಸಿ, ಉಳಿಸಿ ಬೆಳೆಸಲು ಇಂತಹ ಕಮ್ಮಟಗಳ ಆಗಾಗ ಜರುಗಬೇಕು ಎಂದರು.
ವೀರಲೋಕ ಪ್ರಕಾಶನದ ಕೊಡಗು ಜಿಲ್ಲಾ ಯೋಜನಾ ಸಂಘಟಕ ಬಿ.ಜಿ.ಅನಂತಶಯನ ಮಾತನಾಡಿ, ಮನಸಾರೆ ಪ್ರತಿಯೊಬ್ಬರು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಕನ್ನಡ ಪುಸ್ತಕಗಳನ್ನು ಓದುವ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಪಣ ತೊಡಬೇಕೆಂದು ನುಡಿದರು.
ಕಾಲೇಜಿನ ಪ್ರಾಂಶುಪಾಲ ವಿಜಯ ಮಾತನಾಡಿ, ಬರೆಯುವ ಕಥೆಗಳು ಸಮಾಜಕ್ಕೆ ಬೆಳಕು ತೋರುವಂತಿರಬೇಕೆ ಹೊರತು ಸಮಾಜದ ಅಶಾಂತಿಗೆ ಕಾರಣವಾಗಬಾರದು ಎಂದು ಹೇಳಿದರು.
ಬರಹಗಾರರು ತರಬೇತುದಾರ ಪ್ರಭಾಕರ ಶಿಶಿಲ ಮಾತನಾಡಿ, ಈ ಎಲ್ಲಾ ಸಂಸ್ಥೆಗಳು ಸೇರಿ ಕೊಡಗಿನಲ್ಲಿ ಪುಸ್ತಕ ಭಂಡಾರ ಆರಂಭಿಸುವಂತೆ ಸಲಹೆ ನೀಡಿದರು.
ಸಾಹಿತಿಗಳಾದ ಸ್ಮಿತಾ ಅಮೃತರಾಜ್, ಸುನೀತ ಲೋಕೇಶ್, ಸಹನಾ ಕಾಂತಬೈಲು, ನೌಶಾದ್ ಮಾತನಾಡಿದರು. ದೇಸಿ ಜಗಲಿ ಕಥಾ ಕಮ್ಮಟ ಎರಡು ದಿನಗಳ ಕಾಲ ನಡೆಯಲಿದ್ದು ಬರಹಗಾರರು ಹಾಗೂ ತರಬೇತುದಾರ ಬಿ.ಪ್ರಭಾಕರ ಶಿಶಿಲರವರು ತರಬೇತಿ ನೀಡಲಿದ್ದಾರೆ.
ಜಾನಪದ ಪರಿಷತ್ ಕೊಡಗು ಘಟಕದ ಉಪಾಧ್ಯಕ್ಷರುಗಳಾದ ಶೋಭಾ ಸುಬ್ಬಯ್ಯ, ಅಂಬೆಕಲ್ ಕುಶಾಲಪ್ಪ, ರವೀಂದ್ರ ರೈ, ಕಾರ್ಯದರ್ಶಿ ಉಜ್ವಲ್ ರಂಜಿತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಚ್.ಟಿ.ಅನಿಲ್ ಉಪಸ್ಥಿತರಿದ್ದರು. ಇದೇ ಸಂದರ್ಭ ಪ್ರಭಾಕರ ಶಿಶಿಲ ಹಾಗೂ ಮೋಹನ್ ಪಾಳೇಗಾರ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು.