

ಮುದ್ದೇಬಿಹಾಳ: ಧರ್ಮದ ಹೆಸರಿನಲ್ಲಿ ಮನುಷ್ಯರ ಶೋಷಣೆ ಸಲ್ಲದು. ದೇವರನ್ನು ನಂಬುತ್ತೇವೆ ಎನ್ನುತ್ತಲೇ ಮತ್ತೊಂದು ಧರ್ಮವನ್ನು ತುಳಿಯುವುದನ್ನು ವಿರೋಧಿಸಬೇಕು. ಮಾನವೀಯತೆ ಪ್ರತಿಪಾದಿಸಿದ 6ನೇ ಶತಮಾನದ ಮಹಮ್ಮದ್ ಪೈಗಂಬರ್, 12ನೇ ಶತಮಾನದ ಬಸವಣ್ಣ ಅವರ ತತ್ವಗಳ ಅನುಷ್ಠಾನ, ಪಾಲನೆ ಆಗಬೇಕು ಎಂದು ಕೊಡೇಕಲ್ ದುರದುಂಡೇಶ್ವರ ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.
ಪಟ್ಟಣದ ವಿಜಯಮಹಾಂತೇಶ ಮಂಗಲ ಭವನದಲ್ಲಿ ಮುದ್ದೇಬಿಹಾಳ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರವಂತ, ಪ್ರವಾದಿ ಸಂದೇಶ ಅಭಿಯಾನ&2024ರ ಸೀರತ್ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಭಾರತ ಎಲ್ಲರನ್ನೂ ಒಳಗೊಂಡಿರುವ ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಜಗತ್ತಿನ ಏಕೈಕ ದೇಶವಾಗಿದೆ. ನಮ್ಮ ಧರ್ಮಾಚರಣೆಗಳು ಒಳಗಿರಲಿ. ಹೊರಗೆ ಬಂದಾಗ ನಾವೆಲ್ಲರೂ ಒಂದಾಗಿರಬೇಕು. ಶಾಂತಿ, ಪ್ರೀತಿ ಧರ್ಮದ ಎರಡು ಕಣ್ಣುಗಳು. ಸ್ವಧರ್ಮ ನಿಷ್ಠೆ ಪರಧರ್ಮ ಪ್ರೀತಿ ನಮ್ಮದಾಗಿರಲಿ. ಎಲ್ಲ ದಾರ್ಶನಿಕರ ತತ್ವಗಳನ್ನು ಸರಿಯಾಗಿ ಅಧ್ಯಯನ ಮಾಡಿದರೆ ಅವರ ಹೆಸರಿನಲ್ಲಿ ನಡೆಯುವ ಸಂಭ್ರಮಾಚರಣೆಗಳಿಗ ಕಡಿವಾಣ ಹಾಕಬಹುದು ಎಂದರು.
ಇಳಕಲ್ನ ವಾಗ್ಮಿ ಲಾಲಹುಸೇನ ಕಂದಗಲ್ಲ ಮಾತನಾಡಿ, ಪ್ರವಾದಿಗಳ ಜನ್ಮದಿನಾಚರಣೆಗೆ ಡಿಜೆ ಬಳಕೆ, ಸಂಭ್ರಮ ಸಲ್ಲದು. ಪ್ರವಾದಿಗಳು ಇದನ್ನು ಒಪ್ಪಿಲ್ಲ. ನಿಮ್ಮಿಂದ ಯಾರಿಗೂ ತೊಂದರೆಯಾಗಬಾರದು ಅನ್ನೋದು ಪ್ರವಾದಿಯವರ ಸಂದೇಶವಾಗಿದೆ. ಇಸ್ಲಾಮಿನ ದೇಹ, ವೇದದ ಮಿದುಳು ಒಂದಾದಾಗ ಮಾತ್ರ ದೇಶದಲ್ಲಿ ಏಕತೆ, ಒಗ್ಗಟ್ಟು, ಶಾಂತಿ, ಸಹಬಾಳ್ವೆ ಸಾಧ್ಯವಾಗುತ್ತದೆ. ನಾವೆಲ್ಲರೂ ಧರ್ಮನಿಷ್ಠೆ, ನ್ಯಾಯದ ಪರವಾಗಿರಬೇಕು. ಮುಸಲ್ಮಾನರು ಜಾತಿವಾದಕ್ಕಾಗಿ ಜನರನ್ನು ಸಂಟಿಸಬಾರದು. ಸೂಫಿ ಸಂತರು ಗೌರವಾನ್ವಿತರೇ ಹೊರತು ಪೂಜನೀಯರಲ್ಲ. ದೇವ ಒಬ್ಬನೇ ಪೂಜನೀಯ. ಜನ್ಮದಿನ ಇದ್ದವರನ್ನು ಪೂಜಿಸಬಾರದು. ಪ್ರೀತಿ ಸಂಕುಚಿತಗೊಳಿಸಿದ್ದೇವೆ. ಮನುಷ್ಯರನ್ನು ಪ್ರೀತಿಸಬೇಕು ಎಂದರು.
ನಿವೃತ್ತ ಡಿವೈಎಸ್ಪಿ ಎಸ್.ಎಸ್.ಹುಲ್ಲೂರ ಮಾತನಾಡಿದರು. ಅಧ್ಯತೆ ವಹಿಸಿದ್ದ ಹಿಂದ್ನ ಬೆಳಗಾವಿಯ ವಲಯ ಸಂಚಾಲಕ ಮೆಹಬೂಬ ಆಲಂ ಬಡಗನ್, ಅಭಿಯಾನದ ಸಂಚಾಲಕ ನೂರೇನಬಿ ನದಾ ಮಾತನಾಡಿದರು. ಮೌಲಾನಾ ಮಹ್ಮದರಫೀಕ ನದಾ ಕುರಾನ್ ಪಠಿಸಿದರು. ಅಬ್ದುಲ್ಗಣಿ ಮಕಾನದಾರ ಸ್ವಾಗತಿಸಿ ನಿರೂಪಿಸಿದರು. ಮಹಮ್ಮದ್ ಚಪ್ಪರಬಂದ್ ವಂದಿಸಿದರು. ಹಿಂದು& ಮುಸ್ಲಿಂ ಸಮಾಜದ ಹಲವು ಪ್ರಮುಖರು, ಗಣ್ಯರು ಮಹಿಳೆಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಎಲ್ಲರಿಗೂ ಸಿಹಿ ಪಾನೀಯ ವಿತರಿಸಲಾಯಿತು.