ಮುಂದಿನ ಪರಂಪರೆ ಜಾತಿ ನಿರಾಕರಿಸುವ ಸಂಸ್ಕೃತಿ ಆಗಲಿ: ಚಿಂತಕ ಪ್ರೊ.ಎಚ್.ಎಸ್.ಶಿವಪ್ರಕಾಶ್ ಆಶಯ

2
Published on

ಮೈಸೂರು: ಆಚಾರ್ಯ ಪರಂಪರೆಯನ್ನು ಬಿಡಿಸಿಕೊಂಡು ಗುರು ಪರಂಪರೆಯತ್ತ ಹೋಗಬೇಕಾದ ಅಗತ್ಯವಿದೆ ಎಂದು ಚಿಂತಕ ಪ್ರೊ.ಎಚ್.ಎಸ್.ಶಿವಪ್ರಕಾಶ್ ಅಭಿಪ್ರಾಯಪಟ್ಟರು.
ರಂಗಾಯಣದಿಂದ ಆಯೋಜಿಸಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಶನಿವಾರ ಆಯೋಜಿಸಿದ್ದ ವಚನ ಚಳವಳಿಯ ಸಮಕಾಲೀನ ವ್ಯಾಖ್ಯಾನ ಕುರಿತ 2 ದಿನಗಳ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಗುರು ಪರಂಪರೆಯಲ್ಲಿ ಜಾತಿ ಸೂಚಕಗಳಿಲ್ಲ. ಆದರೆ ಆಚಾರ್ಯ ಪರಂಪರೆಯಲ್ಲಿ ಜಾತಿ ಸೂಚಕಗಳಿವೆ. ಅದರಿಂದ ಬಿಡಿಸಿಕೊಂಡು ಗುರು ಪರಂಪರೆಯತ್ತ ಹೋಗಬೇಕಾದ ಅಗತ್ಯವಿದೆ. ಮುಂದಿನ ಪರಂಪರೆ ಜಾತೀಯತೆಯನ್ನು ನಿರಾಕರಿಸುವ ಸಂಸ್ಕೃತಿ ಆಗಬೇಕು. ಹಾಗೆಯೇ ದೇಶದ ಐಕ್ಯತೆ, ಅನೇಕತೆ ಅರ್ಥ ಮಾಡಿಕೊಳ್ಳುವ ಪರಂಪರೆ, ಸೃಜನಶೀಲ ಪರಂಪರೆಯ ಅಗತ್ಯವಿದೆ ಎಂದು ಹೇಳಿದರು.
ಧರ್ಮವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಪಾದಿಸಿದ್ದಾರೆ. ಹಾಗೆಯೇ ಬಸವಣ್ಣ ಅವರು ದಯೆಯೇ ಧರ್ಮದ ಮೂಲವಯ್ಯ ಎಂದಿದ್ದಾರೆ. ವಚನಗಳಲ್ಲಿರುವ ಸಂದೇಶ ಅರ್ಥ ಮಾಡಿಕೊಳ್ಳಬೇಕು. ವಚನಕಾರರಲ್ಲಿ ಅಂತರ ವಿರೋಧವೇ ವಚನ ಪರಂಪರೆಯ ಶಕ್ತಿ ಆಗಿದೆ. ಇಂದು ನಾವು ವಚನಗಳ ಮೇಲೆ ಕಟ್ಟಿಕೊಂಡಿರುವ ಕಥನವು ವಚನಗಳ ಮೇಲೆ ನೇರವಾಗಿ ಆಧಾರಿತವಾದುದಲ್ಲ ಎಂದರು.
ವಿರಕ್ತರ ಸಂಪಾದನೆ, ಶೂನ್ಯ ಸಂಪಾದನೆ ಮೇಲೆ ಮರುವ್ಯಾಖ್ಯಾನ ಮಾಡಿದರು. ಅದರ ಆಧಾರದ ಮೇಲೆ ಮಾತನಾಡುತ್ತಿದ್ದೇವೆ. ಹೀಗಾಗಿ, ವಚನಗಳನ್ನು ನೇರವಾಗಿ ನೋಡಿ ವ್ಯಾಖ್ಯಾನಿಸುವ ಅಗತ್ಯವಿದೆ. ವಚನ ಪರಂಪರೆಯ ಅನೇಕ ಸತ್ಯಗಳನ್ನು ಬಿಚ್ಚಿಡುವ ಶೂನ್ಯ ಸಂಪಾದನೆಯು ಒಂದು ರೀತಿಯಲ್ಲಿ ವಚನಗಳಿಗೆ ಅನ್ಯಾಯ ಮಾಡಿದೆ. ಏಕೆಂದರೆ, ಶೋಷಿತ, ಶ್ರಮಜೀವಿ ವರ್ಗದವರು ಹಾಗೂ ಮಹಿಳೆಯರ ದನಿಗಳನ್ನು ಬದಿಗೊತ್ತಲಾಗಿದೆ. ವಚನಗಳ ಮರುವ್ಯಾಖ್ಯಾನಕ್ಕೆ ವೀರಶೈವೇತರ ಸಮುದಾಯದವರ ಯೋಗದಾನ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಮಾತನಾಡಿ, ಬಸವಣ್ಣ ಹೇಳಿದ್ದನ್ನು ಸ್ವಲ್ಪವಾದರೂ ಪಾಲಿಸದಿದ್ದರೆ ನಮ್ಮದನ್ನಾಗಿ ಮಾಡಿಕೊಳ್ಳದಿದ್ದರೆ ಸಾಂಸ್ಕೃತಿಕ ನಾಯಕನ್ನಾಗಿ ಮಾಡಿಕೊಂಡು ಏನು ಪ್ರಯೋಜನ ಎಂದರು.
ನಾವಿಂದು ತೂತು ಬಿದ್ದ ಚೀಲದಲ್ಲಿ ವಚನಗಳನ್ನು ಹಾಕಿಕೊಂಡು ಓಡಾಡುತ್ತಿದ್ದೇವೆ. ಹೇಳಿದ್ದನ್ನೇ ಹೇಳುತ್ತಿದ್ದೇವೆ. ಪ್ರಶ್ನೆ ಕೇಳಿದರೆ ಸುಂಕ ಕೊಡಬೇಕು. ಎಂ.ಎಂ.ಕಲಬುರ್ಗಿ ಅಂಥವರು ಜೀವದ ಸುಂಕವನ್ನೇ ಕೊಟ್ಟರು. ಬಸವಣ್ಣನನ್ನು ಉದಾಹರಿಸುವ ರಾಜಕಾರಣಿಗಳು ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದು, ಆದರ್ಶವನ್ನು ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಹುರೂಪಿ ಸಂಚಾಲಕ ಪ್ರೊ.ಎಚ್.ಎಸ್. ಉಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net