ಪತ್ರಿಕೆಗಳು ವಿಶ್ವಾಸಾರ್ಹತೆ ಕಾಯ್ದುಕೊಳ್ಳಲಿ

kolara
Published on

ಕೋಲಾರ: ಪತ್ರಕರ್ತನಾದವನು ನಿರಂತರವಾಗಿ ಅಧ್ಯಯನ ಮಾಡುತ್ತಿರಬೇಕು ಹಾಗೂ ವಿಷಯದಲ್ಲಿನ ಸತ್ಯಾಸತ್ಯತೆಗಳ ಬಗ್ಗೆ ಪರಾಮರ್ಶೆ ಮಾಡಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ, ಪತ್ರಕರ್ತ ಕೆ.ವಿ.ಪ್ರಭಾಕರ್​ ತಿಳಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಪತ್ರಕರ್ತರ ಭವನದಲ್ಲಿ ಗುರುವಾರ ಯುವ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ "ಪತ್ರಿಕೋದ್ಯಮ ಇಂದು-&ಮುಂದು' ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಿಕೋದ್ಯಮವು ವಿಶ್ವಾಸಾರ್ಹ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸಬೇಕು. ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಮಾರಕವಾಗಿದೆ. ಕರೊನಾ ನಂತರದಲ್ಲಿ ಪತ್ರಿಕೋದ್ಯಮ ಚೇತರಿಸಿಕೊಳ್ಳುತ್ತಿದೆ. ಮುದ್ರಣ ಮಾಧ್ಯಮಗಳು ಎಲೆಕ್ಟ್ರಾನಿಕ್​ ಮಾಧ್ಯಮಗಳ ಅಬ್ಬರದ ಹೊರತಾಗಿಯೂ, ವಿಶ್ವಾಸಾರ್ಹ ಸುದ್ದಿ ನೀಡುವಲ್ಲಿ ಹಾಗೂ ಓದುಗರ ಮನಗೆಲ್ಲುವಲ್ಲಿ ಮೇಲುಗೈ ಸಾಧಿಸಿವೆ. ಇದರೊಂದಿಗೆ ಆದಾಯವೂ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದರು.

ವಿದ್ಯಾರ್ಥಿಗಳು ಅಧ್ಯಯನಶೀಲರಾಗಿರಬೇಕು. ಜೀವನದಲ್ಲಿ ಅಧ್ಯಯನಶೀಲತೆ ರೂಢಿಸಿಕೊಳ್ಳಬೇಕು. ಸುದ್ದಿ ಮಾಡುವ ಮುನ್ನ ಮರುಪರಿಶೀಲನೆ ಮಾಡಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಒಬ್ಬರನ್ನು ಪ್ರಶ್ನಿಸುವ ಮುನ್ನ, ಆ ವಿಷಯದ ಬಗ್ಗೆ ಪರಿಪೂರ್ಣವಾಗಿ ತಿಳಿದುಕೊಂಡಿರಬೇಕು ಎಂದರು.

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್​ ಮಾತನಾಡಿ, ಹಿಂದಿನ ಕಾಲದಲ್ಲಿ ಯಾವುದೇ ಕೆಲಸ ಸಿಗಲಿಲ್ಲ, ಅಂದರೆ ಒಂದು ಶಿಕ್ಷಕರಾಗಿ, ಇಲ್ಲದಿದ್ದರೆ ಪತ್ರಕರ್ತರಾಗಿ ಅನ್ನುವ ಕಾಲವಿತ್ತು. ಆದರೆ ಪ್ರಸ್ತುತ ಶಿಕ್ಷಕರಿಗೆ ಮತ್ತು ಪತ್ರಕರ್ತರಿಗೆ ಯಾವುದೇ ಧಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.

ಕೋಲಾರ ಜಿಲ್ಲೆಯ ಪತ್ರಕರ್ತರ ಕಲ್ಯಾಣ ನಿಧಿಗೆ ಕೆ.ವಿ.ಪ್ರಭಾಕರ್​ 25 ಲಕ್ಷ ರೂಪಾಯಿಗಳನ್ನು ಮುಖ್ಯಮಂತ್ರಿಗಳ ನಿಧಿಯಿಂದ ಕೊಡಿಸಿದ್ದಾರೆ ಮತ್ತು ಜಿಲ್ಲೆಯ ಪತ್ರಕರ್ತರ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ ಎಂದು ತಿಳಿಸಿದರು.

ಪತ್ರಿಕೋದ್ಯಮ ಶಿಕ್ಷಣಕ್ಕೆ ಉತ್ತೇಜನ ನೀಡಲಿ

ವಿದ್ಯಾರ್ಥಿಗಳು ಇಂದು ಮತ್ತು ಮುಂದಿನ ಪತ್ರಿಕೋದ್ಯಮದ ಅಧ್ಯಯನ ಮಾಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಯ ಪ್ರಚಾರ ಭರಾಟೆ ಜೋರಾಗಿದ್ದು, ಅಕಾಡೆಮಿಯು ಸುಳ್ಳು ಸುದ್ದಿ ತಡೆಯಲು ಇಂತಹ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಧ್ಯಮ ಅಕಾಡೆಮಿಯ ಅಧ್ಯೆ ಆಯೇಷಾ ಖಾನಂ ಹೇಳಿದರು. ಯುವ ಪತ್ರಕರ್ತರು ಇಂತಹ ಕಾರ್ಯಾಗಾರವನ್ನು ಸದುಪಯೋಗ ಮಾಡಿಕೊಳ್ಳಬೇಕು. ಸರ್ಕಾರವು ಪತ್ರಿಕೋದ್ಯಮ ಅಭ್ಯಸಿಸುವ ಕಾಲೇಜುಗಳಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಉಪಕರಣ ಒದಗಿಸಬೇಕು. ಅಂತೆಯೇ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಹಾಗೂ ಪತ್ರಿಕಾ ಧರ್ಮವನ್ನು ತಪ್ಪದೇ ಪಾಲಿಸಬೇಕು. ಯುವ ಜನತೆ ಈ ಕ್ಷೇತ್ರದಲ್ಲಿ ಹೆಚ್ಚು- ಸಾಧನೆ ಮಾಡಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net