

ಮೈಸೂರು: ಹೊಸ ತಂತ್ರಜ್ಞಾನವನ್ನು ಪರಿಣಾಮಕಾರಿ ಆಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಶೈಕ್ಷಣಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.
ಮೈವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ವತಿಯಿಂದ ಮಾನಸಗಂಗೋತ್ರಿಯ ಕೆರಿಯರ್ ಹಬ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಸ್ಪರ್ಧಾತ್ಮಕ ಬುದ್ಧಿಮತ್ತೆ- ಗ್ರಂಥಾಲಯ ಮತ್ತು ಮಾಹಿತಿ ಸೇವೆಯ ಸದ್ಬಳಕೆ’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃತಕ ಬುದ್ಧಿಮತ್ತೆ(ಎಐ), ಚಾಟ್ ಜಿಪಿಟಿಯಂತಹ ಹೊಸ ತಂತ್ರಜ್ಞಾನಗಳು ಚಾಲ್ತಿಗೆ ಬಂದಿವೆ. ಇಂತಹ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳು ಬಳಕೆ ಮಾಡಿಕೊಳ್ಳಬೇಕು ಎಂದರು.
ಸ್ಪರ್ಧಾತ್ಮಕ ಬುದ್ಧಿಮತ್ತೆ ಮಹತ್ವ ಪಡೆದುಕೊಂಡಿದೆ. ತಂತ್ರಜ್ಞಾನ ಬಳಕೆ ಮತ್ತು ಸಮೂಹ ಅಧ್ಯಯನದಿಂದ ಸಾಧನೆ ಮಾಡಬಹುದಾಗಿದೆ ಎಂದು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಂತಹ ಚಟುವಟಿಕೆಗಳಿಗೆ ಸಮೂಹ ಓದು ಹೆಚ್ಚು ನೆರವಿಗೆ ಬರುತ್ತಿದೆ. ಇದಕ್ಕೆ ಪೂರಕವಾಗಿ ಡಿಜಿಟಲ್ ಗ್ರಂಥಾಲಯ ಸೇವೆ ಸಹ ವಿಸ್ತರಣೆಯಾಗುತ್ತಿದೆ. ಲಭ್ಯ ಮಾಹಿತಿಯನ್ನು ಓದು ಹಾಗೂ ವೈಯಕ್ತಿಕ ಒಳಿತಿಗೆ ಪೂರಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಹೈದರಾಬಾದ್‌ನ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎನ್.ಜಿ. ಸತೀಶ್ ಉಪನ್ಯಾಸ ನೀಡಿದರು. ಇನ್‌ಫಾರ್ಮೆಟಿಕ್ಸ್ ಇಂಡಿಯಾ ಲಿಮಿಟೆಡ್ ಕಂಪನಿಯ ಅಧ್ಯಕ್ಷ ಎನ್.ವಿ.ಸತ್ಯನಾರಾಯಣ, ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಎಂ. ಚಂದ್ರಶೇಖರ್ ಇದ್ದರು.