ನೂತನ ಶಾಸಕರು ಬಡವರಿಗೆ ನಿವೇಶನ ನೀಡಲಿ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಿ

MANSOOR
Published on

ಮಡಿಕೇರಿ: ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾಗಿರುವ ಇಬ್ಬರು ಶಾಸಕರು ಬಡವರಿಗೆ ನಿವೇಶ ನೀಡಲು ಕ್ರಮ ಕೈಗೊಳ್ಳಬೇಕೆಂದು ಮಡಿಕೇರಿ ನಗರಸಭಾ ಸದಸ್ಯ ಎಂ.ಕೆ.ಮನ್ಸೂರ್ ಆಲಿ ಒತ್ತಾಯಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ೩೦ ವರ್ಷಗಳಿಂದ ಜಿಲ್ಲೆಯಾದ್ಯಂತ ನಿವೇಶನ ರಹಿತರಿಗೆ ನಿವೇಶನ ನೀಡುವ ಮತ್ತು ಸ್ವಂತ ಸೂರು ಕಲ್ಪಿಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿಲ್ಲ. ಬೃಹತ್ ಪ್ರಮಾಣದ ಸರ್ಕಾರಿ ಭೂಮಿಯನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡುವ ಕಾರ್ಯಕ್ಕೆ ಇಬ್ಬರು ನೂತನ ಶಾಸಕರು ನಾಂದಿ ಹಾಡಬೇಕೆಂದು ಆಗ್ರಹಿಸಿದ ಅವರು, ಅಭಿವೃದ್ಧಿಪರ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ತಿಳಿಸಿದ್ದಾರೆ.


ಮಡಿಕೇರಿ ನಗರಸಭಾ ಕಚೇರಿಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕೊರತೆ ಇದೆ. ಇದರಿಂದ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿದೆ. ತಕ್ಷಣ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಈ ಕ್ಷೇತ್ರದ ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ನೂತನ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಮತ್ತು ಕೊಡಗಿನ ಅಭಿವೃದ್ಧಿಯನ್ನು ನಿರೀಕ್ಷಿಸುತ್ತೇವೆ ಎಂದು ಮನ್ಸೂರ್ ಆಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net