ಮೈಸೂರು ದಸರಾ ಆಹಾರ ಮೇಳ ವೈವಿಧ್ಯಮಯವಾಗಿರಲಿ

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಈ ಸಲ ದಸರಾ ಆಹಾರ ಮೇಳ ವೈವಿಧ್ಯಮಯವಾಗಿರಲಿ, ಪ್ರತಿ ಜಿಲ್ಲೆಯ ಸಾಂಪ್ರದಾಯಿಕ ಖಾದ್ಯಗಳಿಗೂ ಆದ್ಯತೆ ದೊರೆಯಲಿ, ನಗರಮಟ್ಟ ಬದಲಿಗೆ ರಾಜ್ಯ ಮಟ್ಟದ ಭೋಜನ ಉತ್ಸವವಾಗಲಿ..!

ಸಾರ್ವಜನಿಕರು ಮತ್ತು ಆಹಾರ ಪ್ರಿಯರ ಹಕ್ಕೊತ್ತಾಯ ಇದು. ಒಂದೇ ಸೂರಿನಡಿ ತರಹೇವಾರಿ ಖಾದ್ಯಗಳ ರುಚಿಯನ್ನು ಸವಿಯುವ ಅವಕಾಶ ಕಲ್ಪಿಸಿಕೊಡಬೇಕು. ಅದಕ್ಕಾಗಿ ಬರೀ ಮೈಸೂರಿನವರಿಗೆ ಮೀಸಲಿಡುವ ಬದಲು, ರಾಜ್ಯದ ವಿವಿಧ ಜಿಲ್ಲೆಗಳ ಸಾಂಪ್ರದಾಯಿಕ ಖಾದ್ಯ ತಯಾರಕರನ್ನು ಕರೆಸಬೇಕು. ಇದರೊಂದಿಗೆ ದಸರಾ ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಿಗೆ ವಿವಿಧ ಬಗೆಯ ತಿನಿಸುಗಳು ಕೈಗೆಟುಕುವ ದರದಲ್ಲಿ ದೊರೆಯಬೇಕಾಗಿದೆ.

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಆಹಾರ ಮೇಳ. ಅ.3ರಿಂದ ಮೇಳ ಸಹ ಶುರುವಾಗಲಿದೆ. ಹಳೇ ಜಿಲ್ಲಾಧಿಕಾರಿ ಕಚೇರಿ ಎದುರಿನ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೈದಾನದಲ್ಲಿ 10 ದಿನಗಳ ಕಾಲ ನಡೆಯುವ ಮೇಳವು ಭೋಜನ ಪ್ರಿಯರಿಗೆ ರುಚಿಕರ ಬಗೆಬಗೆಯ ಆಹಾರ ಉಣಬಡಿಸಲಿದೆ.

ಹೊಸ ಸ್ಪರ್ಶ ನೀಡಿ:

ಪ್ರತಿ ಬಾರಿಯೂ ಆಹಾರ ಮೇಳಕ್ಕೆ ಹೊಸತನದ ಕೊರತೆ ಬಾಧಿಸುತ್ತದೆ. ಸಂತೆಗಾಗಿ ನೇಯ್ದ ಸೀರೆಯಂತಿರುತ್ತದೆ. ಬರೀ ಮೈಸೂರಿನ ಹೋಟೆಲ್‌ನವರೇ ತುಂಬಿರುತ್ತಾರೆ. ರಾಜ್ಯದಲ್ಲಿ ವಿವಿಧ ಸಾಂಪ್ರದಾಯಿಕ ಖಾದ್ಯ ಹೆಸರಿನಲ್ಲಿ ಇವರಿಗೆ ಮಳಿಗೆ ತೆರೆಯಲು ಅವಕಾಶ ನೀಡಲಾಗುತ್ತಿದೆ. ಹೀಗೆ ಮಾಡುವುದರಿಂದ ಆಯಾ ಭಾಗದ ದೇಸಿ ಶೈಲಿಯ ಆಹಾರ ಪದಾರ್ಥದ ಸೊಗಡು, ರುಚಿ, ಸ್ವಾದಿಷ್ಟ ಮಾಯವಾಗಿರುತ್ತದೆ. ಇದು ಭೋಜನ ಪ್ರಿಯರಿಗೆ ನಿರಾಸೆಯೊಂದಿಗೆ ಬೇಸರವನ್ನೂ ಉಂಟು ಮಾಡುತ್ತದೆ.

ಆದರೆ ದುಡ್ಡು ಮಾತ್ರ ಎರಡು ಪಟ್ಟು ಖರ್ಚು ಆಗಿರುತ್ತದೆ. ಈ ಸಲ ಇದಕ್ಕೆ ಅವಕಾಶ ಕೊಡಬಾರದು. ಏಕತಾನತೆಯನ್ನು ಮುರಿದು ಹೊಸತನ, ವಿವಿಧ ಸ್ಪರ್ಶ ಕೊಡಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ವಹಿಸಬೇಕು.
ಆಯಾ ಜಿಲ್ಲೆಯ ಸಾಂಪ್ರದಾಯಿಕ ಖಾದ್ಯ ಪರಿಚಯಿಸಬೇಕು. ಅದಕ್ಕಾಗಿ ಆಯಾ ಭಾಗದ ಬಾಣಸಿಗರು, ಹೋಟೆಲ್‌ನವರು, ಆಹಾರ ತಯಾರಕರನ್ನು ಕರೆಸಬೇಕು. ಈ ಹೊಣೆಗಾರಿಕೆಯನ್ನು ಆಯಾ ಜಿಲ್ಲಾಡಳಿತಕ್ಕೆ ವಹಿಸಬೇಕು.

ಇಲ್ಲವೇ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಬೇಕು. ಇದರಿಂದ ದೇಸಿ ಮತ್ತು ಖಂಡಾಂತರ ಆಹಾರ ಪದ್ಧತಿಯೊಂದಿಗೆ ಪ್ರಾದೇಶಿಕ, ಹೊರ ರಾಜ್ಯಗಳ ವೈವಿಧ್ಯದ ಊಟೋಪಚಾರ ಸಿಗಲಿದೆ. ಇದರ ಫಲವಾಗಿ ಮೈಸೂರಿನವರ ಲಾಬಿ ಮತ್ತು ಒತ್ತಡವೂ ಕಡಿಮೆಯಾಗಲಿದೆ ಎಂಬುದು ಅಧಿಕಾರಿಯೊಬ್ಬರ ಅಭಿಪ್ರಾಯ.

ಸಿರಿಧಾನ್ಯ ಅಡುಗೆಗೆ ಪ್ರಾಮುಖ್ಯವಿರಲಿ:

ವೈವಿಧ್ಯಮಯ ಆಹಾರ ಪದಾರ್ಥದೊಂದಿಗೆ ಆರೋಗ್ಯ ಸ್ನೇಹಿ ಖಾದ್ಯಕ್ಕೆ ಆದ್ಯತೆ ಕೊಡಬೇಕು. ಸಿರಿಧಾನ್ಯಗಳ ಅಡುಗೆ ಸಿಗುವಂತಾಗಬೇಕು. ಆಧುನಿಕ ಆಹಾರ ಅಭ್ಯಾಸಗಳಿಂದ ಜನರ ಮಾನಸಿಕ, ದೈಹಿಕ ಆರೋಗ್ಯಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಸಹಜ, ನೈಸರ್ಗಿಕ, ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಧಾನ್ಯಗಳು, ಹಣ್ಣುಹಂಪಲು, ತರಕಾರಿ ಕಾಯಿ ಪಲ್ಯಗಳಿಂದ ತಯಾರಿಸಿದ ಅಡುಗೆಗಳಿಗೆ ಆದ್ಯತೆ ಕೊಡಬೇಕು. ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆಗೂ ಸ್ಥಳಾವಕಾಶ ಕಲ್ಪಿಸಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಸಿರಿಧಾನ್ಯ ಬೆಳೆಗಾರರು, ಸಹಜ, ನೈಸರ್ಗಿಕ ಕೃಷಿಕರು, ಸಾವಯವ ಕೃಷಿಕರು, ಸಿರಿಧಾನ್ಯ ಬೆಳೆಗಾರರ ಸಂಘಗಳನ್ನೂ ಆಹ್ವಾನಿಸಬೇಕು. ಸಿರಿಧಾನ್ಯ ಅಡುಗೆ ತಯಾರಿಸಲು, ಸಹಜ, ಸಾವಯವ ಕೃಷಿಯಲ್ಲಿ ಬೆಳೆದ ಹಣ್ಣು, ತರಕಾರಿ ಮಾರಾಟಗಾರರು ಮೇಳಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು.

ಅನ್ಯರಾಜ್ಯಗಳ ಆಹಾರವೂ ದೊರೆಯಲಿ:

ದಕ್ಷಿಣ ಕರ್ನಾಟಕ ಆಹಾರ ಪದ್ಧತಿ, ಉತ್ತರ ಕರ್ನಾಟಕ ಆಹಾರ ಪದ್ಧತಿ, ಟಿಬೆಟಿಯನ್ ಆಹಾರ ಪದ್ಧತಿ, ಹೊರ ರಾಜ್ಯದ ಆಹಾರ ಪದ್ಧತಿಯಡಿ ಕಾಶ್ಮೀರಿ, ಪಂಜಾಬಿ, ರಾಜಸ್ಥಾನಿ, ಈಶಾನ್ಯ ಭಾರತ ಆಹಾರ ಪದ್ಧತಿ, ಆಂಧ್ರ ಶೈಲಿ, ಕೇರಳ ಶೈಲಿ, ತಮಿಳುನಾಡು ಶೈಲಿ, ಮರಾಠಿ ಶೈಲಿಯಲ್ಲಿ ಸಸ್ಯಾಹಾರಿ, ಶಾಖಾಹಾರಿ ಖಾದ್ಯ ದೊರೆಯುವಂತಾಗಲಿದೆ. ಇದನ್ನು ಆಯಾ ಭಾಗದವರು ತಯಾರಿ ಕೊಡುವಂತೆಯೂ ವ್ಯವಸ್ಥೆ ಮಾಡಬೇಕು.

ವಿದೇಶಿ ಖಾದ್ಯವೂ ಸಿಗುವಂತಾಗಲಿ:

ಚೈನೀಸ್, ಇಟಾಲಿಯನ್, ಫ್ರೆಂಚ್, ಆಫ್ರಿಕನ್ ಶೈಲಿಯ ಆಹಾರವೂ ಗ್ರಾಹಕರಿಗೆ ಸುಲಭವಾಗಿ ಸಿಗಬೇಕು. ಅದಕ್ಕಾಗಿ ಈ ಪದ್ಧತಿಯಡಿ ಆಹಾರ ತಯಾರಿಸುವ ಅಡುಗೆಗಳು, ಸಿರಿಧಾನ್ಯ, ಸಹಜ, ಸಾವಯವ ಧಾನ್ಯಗಳು, ತರಕಾರಿಗಳಲ್ಲಿ ಅಡುಗೆಗಳನ್ನು ಮಾಡುವ ವ್ಯಕ್ತಿಗಳು, ಗೃಹಿಣಿಯರು, ಹೋಟೆಲ್‌ಗಳು, ಸಂಘ-ಸಂಸ್ಥೆಗಳು, ಹೋಟೆಲ್, ರೆಸ್ಟೊರೆಂಟ್‌ಗಳಿಗೆ ಆಹ್ವಾನ ನೀಡಬೇಕು.

ಸಾರ್ವಜನಿಕರಿಗೂ ಅವಕಾಶ ಕಲ್ಪಿಸಿ:

ಪಾರಂಪರಿಕವಾಗಿ ವಿಶೇಷ ಆಹಾರ ತಯಾರಿಸುವವರು, ವಿಶೇಷ ರುಚಿ ಅಥವಾ ಹೊಸ ತರಹದ ರುಚಿ ಹೊಂದಿರುವ ಆಹಾರ ತಯಾರಕರು ಸಹ ಭಾಗವಹಿಸಿ ತಮ್ಮ ಖಾದ್ಯವನ್ನು ಸಾರ್ವಜನಿಕರಿಗೆ ಉಣಬಡಿಸಲು ವೇದಿಕೆ ಕಲ್ಪಿಸಿಕೊಡಬೇಕು. ಇವರು ತಯಾರಿಸುವ ಖಾದ್ಯವು ಜನರನ್ನು ಆಕರ್ಷಿಸಲಿ

‘ಟ್ರಾಫಿಕ್ ಜಾಮ್’ ತಪ್ಪಿಸಿ

ಆಹಾರ ಮೇಳದ ಸುತ್ತಲು ಉಂಟಾಗುವ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಒತ್ತು ನೀಡಬೇಕು. ಮೇಳದಲ್ಲಿ ಅತಿಯಾದ ಒತ್ತಡ ಸೃಷ್ಟಿಯಾಗಲಿದೆ. ಜನದಟ್ಟಣೆ ಸಹ ಹೆಚ್ಚಾಗುತ್ತದೆ. ಸಂಜೆ 5ರಿಂದ ರಾತ್ರಿ 10ರ ವರೆಗೆ ಜನಸಾಗರವೇ ಹರಿದುಬರುತ್ತದೆ. ನಿಂತುಕೊಳ್ಳಲು ಸಹ ಜಾಗ ಸಿಗುವುದಿಲ್ಲ. ಜನಪ್ರವಾಹವನ್ನು ನಿಯಂತ್ರಿಸಲು ಪೊಲೀಸರು, ಸ್ವಯಂಸೇವಕರು ಹರಸಾಹಸ ಪಡಬೇಕಾಗುತ್ತದೆ. ವಾಹನಗಳಿಗೆ ಪಾರ್ಕಿಂಗ್ ಸಮಸ್ಯೆ, ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಇದಕ್ಕೆ ಈ ಸಲವಾದರೂ ಪರಿಹಾರ ಕಂಡುಕೊಳ್ಳಬೇಕು.

ಗ್ರಾಹಕರ ಸುಲಿಗೆ ತಡೆಯಿರಿ:

ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು. ಗುಣಮಟ್ಟ ಕಾಪಾಡಬೇಕು. ಆಹಾರ ಪದಾರ್ಥಗಳನ್ನು ದುಬಾರಿ ಬೆಲೆಗೆ ಮಾರಾಟ ಮಾರುವುದು ತಹಬದಿ ಬರಬೇಕು. ಅನೈರ್ಮಲ್ಯ ತಾಂಡವ ತಪ್ಪಿಸಬೇಕು. ಮೇಳಕ್ಕೆ ಬರುವ ಜನರಿಗೆ ಮೂಲ ಸೌಲಭ್ಯ ಕೊರತೆಯಂತಹ ಅವಾಂತರ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಆಹಾರ ಮೇಳದ ಕುರಿತು ಇನ್ನೂ ಸಭೆ ನಡೆದಿಲ್ಲ. ರೂಪುರೇಷೆಯೂ ಅಂತಿಮವಾಗಿಲ್ಲ. ಈ ಸಲ ಆಹಾರ ಮೇಳದಲ್ಲಿ ವೈವಿಧ್ಯ ತರಲು ಪ್ರಯತ್ನಿಸಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳ ಖಾದ್ಯಗಳು ಲಭ್ಯ ಇರುವಂತೆಯೂ ಕ್ರಮ ವಹಿಸಲಾಗುವುದು.ಪ್ರತೀಕ್ ಜಿ.ಹೆಗ್ಡೆದಸರಾ ಆಹಾರ ಮೇಳದ ಕಾರ್ಯದರ್ಶಿ ಮತ್ತು ಆಹಾರ ಇಲಾಖೆಯ ಸಹಾಯಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net