ಕೊಲೆ ಪ್ರಕರಣ ನ್ಯಾಯಯುತವಾಗಿ ತನಿಖೆಯಾಗಲಿ

02 krp 01
ತಾಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ನಂಜುಂಡಪ್ಪ ನೇತೃತ್ವದಲ್ಲಿ ಚೌಡೇನಹಳ್ಳಿ ಗ್ರಾಮಸ್ಥರು ಸುದ್ದಿಗೋಷ್ಠಿಯಲ್ಲಿಯಲ್ಲಿ ಭಾಗಿಯಾಗಿದ್ದರು.
Published on

ಕೆ.ಆರ್.ಪೇಟೆ: ತಾಲೂಕಿನ ಚೌಡೇನಹಳ್ಳಿ ಗ್ರಾಮದ ಬಾರ್ ಬೆಂಡರ್ ರಾಮೇಗೌಡರ(48) ಶವ ಕೃಷ್ಣಾಪುರ ಗ್ರಾಮದ ಬಳಿಯಿರುವ ಸುರವರ್ಧಕ ಬಾರ್ ಬಾಗಿಲಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಪ್ರಕರಣ ನ್ಯಾಯಯುತವಾಗಿ ತನಿಖೆ ಆಗಬೇಕು ಎಂದು ತಾಲೂಕು ಆರ್ಯ ಈಡಿಗರ ಸಂಘ ಒತ್ತಾಯಿಸಿದೆ.

ಏ.29ರ ಸಂಜೆ ರಾಮೇಗೌಡರ ಶವ ಪತ್ತೆಯಾಗಿದೆ. ಶವದ ಮೈಮೇಲೆ ತೀವ್ರ ಸ್ವರೂಪದ ಗಾಯಗಳು ಕಂಡುಬಂದಿದ್ದು ತಲೆಯ ಹಿಂಭಾಗದಲ್ಲಿಯೂ ಗಾಯವಾಗಿದೆ. ಮೇಲುನೋಟಕ್ಕೆ ಇದೊಂದು ಕೊಲೆಯಂತೆ ಕಂಡು ಬಂದಿದ್ದು, ಪ್ರಕರಣ ಗಂಭೀರವಾಗಿ ತನಿಖೆಯಾಗಬೇಕು. ಬಾರ್ ಮಾಲೀಕನಿಂದಲೇ ಕೃತ್ಯ ನಡೆದಿರಬಹುದೆಂದು ಮೃತ ರಾಮೇಗೌಡರ ಪತ್ನಿ ನಾಗರತ್ನಮ್ಮ ಕಿಕ್ಕೇರಿ ಪೊಲೀಸರಿಗೆ ದೂರು ನೀಡಿದ್ದರೂ ಈವರೆಗೂ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಸಂಘದ ಅಧ್ಯಕ್ಷ ನಂಜುಂಡಪ್ಪ ನೇತೃತ್ವದಲ್ಲಿ ಚೌಡೇನಹಳ್ಳಿ ಗ್ರಾಮಸ್ಥರು ಕಿಡಿಕಾರಿದರು.

ಬಾರ್ ಮಾಲೀಕನನ್ನು ಬಂಧಿಸಿ ವಿಚಾರಣೆ ನಡೆಸಬೇಕು. ಜತೆಗೆ ಬಾರ್‌ನ ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು. ಇಲ್ಲದಿದ್ದರೆ ಆರ್ಯ ಈಡಿಗ ಸಮುದಾಯ ಬೀದಿ ಹೋರಟ ನಡೆಸಲಿದೆ ಎಂದು ಎಚ್ಚರಿಸಿದರು.

ರೈತ ಸಂಘದ ತಾಲೂಕು ಮಾಜಿ ಕಾರ್ಯದರ್ಶಿ ಚೌಡೇನಹಳ್ಳಿ ನಾರಾಯಣಸ್ವಾಮಿ, ಮೃತ ರಾಮೇಗೌಡರ ಪತ್ನಿ ನಾಗರತ್ನಮ್ಮ, ರೇಣುಕಾಂಬ ಟ್ರಸ್ಟ್ ಅಧ್ಯಕ್ಷ ವೆಂಕಟಾಚಲ, ಮುಖಂಡರಾದ ಚೌಡೇನಹಳ್ಳಿ ಮೂರ್ತಿ, ಶಂಕರ, ಸಿ.ಕೆ.ರವಿ, ಪ್ರಕಾಶ್, ನಾಗಣ್ಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net