ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಲಿ

MLA BHEEMANNA NAIK
Published on

ಶಿರಸಿ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ರಾಜ್ಯ ಸರ್ಕಾರ ನಿರ್ಧಾರ ಪ್ರಕಟಿಸಿದೆ. ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖಿಸಲಾಗಿರುವ 10 ಜಿಲ್ಲೆಗಳ ಸಂಸದರಿಗೆ ಪತ್ರ ಬರೆದು ಈ ಮಾರಕ ವರದಿಯನ್ನು ರಾಜ್ಯದಲ್ಲಿ ಜಾರಿ ಮಾಡಬಾರದು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸುತ್ತಿದ್ದೇನೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಗೆ ನಡೆಸಲಾದ ಸಮೀಕ್ಷೆಯೇ ಸಮರ್ಪಕವಾಗಿಲ್ಲ. ವಾಸ್ತವವಾಗಿ ಹಳ್ಳಿಗಳಿಗೆ ತೆರಳಿ ಇಲ್ಲಿಯ ಸ್ಥಿತಿ ಗತಿ ಸಮೀಕ್ಷೆ ನಡೆಸದೇ ಉಪಗ್ರಹ ಆಧಾರಿತ ಚಿತ್ರ ಬಳಸಿ ಜಾಗ ಗುರುತಿಸಲಾಗಿದೆ. ಇದರಿಂದಾಗಿ ಶಿರಸಿ ತಾಲೂಕಿನ 29 ಗ್ರಾಮ ಪಂಚಾಯಿತಿಗಳು, ಸಿದ್ದಾಪುರ ತಾಲೂಕಿನ 26 ಗ್ರಾಮ ಪಂಚಾಯಿತಿಗಳು ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಒಳಪಡುತ್ತಿವೆ. ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಸಮಸ್ಯೆ ಉಂಟಾಗುವ, ಮಳೆಯಾಶ್ರಿತ ಕೃಷಿ ಪ್ರಧಾನವಾಗಿರುವ ತಾಲೂಕಿನ ಬನವಾಸಿ ಹೋಬಳಿಯೂ ಕಸ್ತೂರಿ ರಂಗನ್ ವರದಿಯಲ್ಲಿ ಒಳಗೊಂಡಿದೆ. ಈ ರೀತಿ ಅವೈಜ್ಞಾನಿಕ ವರದಿ ಜಾರಿಯಾದಲ್ಲಿ ಮುಂದಾಗುವ ಪರಿಣಾಮಗಳೂ ಘೊರವಾಗರಲಿವೆ ಎಂದರು.

ಅರಣ್ಯ ಅತಿಕ್ರಮಣದಾರರ ಪರವಾಗಿ ಹೋರಾಟ ನಡೆಸುತ್ತಿರುವ ರವೀಂದ್ರನಾಥ ನಾಯ್ಕ ಈಗಾಗಲೇ ಕಸ್ತೂರಿ ರಂಗನ್ ವರದಿಯ ದುಷ್ಪರಿಣಾಮಗಳ ಕುರಿತು ಪಟ್ಟಿ ಮಾಡಿದ್ದಾರೆ. ವರದಿ ಜಾರಿಯಾಗಿದ್ದೇ ಆದಲ್ಲಿ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ವಿದ್ಯುತ್ ಸಂಪರ್ಕ, ಬೋರ್ ವೆಲ್, ಮರಳುಗಾರಿಕೆ, ಕೆಂಪು ಕಲ್ಲು ಸಂಗ್ರಹಣೆ ಯಾವುದಕ್ಕೂ ಆಸ್ಪದ ಸಿಗುವುದಿಲ್ಲ. ಕೃಷಿ ಚಟುವಟಿಕೆಯ ಮೇಲೂ ಸಹ ನಿರ್ಬಂಧ ಹೇರಲಾಗುತ್ತಿದ್ದು, ರಾಸಾಯನಿಕ ಗೊಬ್ಬರ ನೀಡುವಂತಿಲ್ಲ. ಹೊಸ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಈಗ ಶೇ. 18ರಷ್ಟು ಮಾತ್ರ ಕೃಷಿ ಕ್ಷೇತ್ರವಿದ್ದು, ಈ ರೈತರೂ ಸಮಸ್ಯೆ ಎದುರಿಸಲಿದ್ದಾರೆ. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ ಉಳಿಯಬೇಕು. ಈಗಾಗಲೇ ಇರುವ ಕಾನೂನು, ನೀತಿ ನಿಯಮದಿಂದ ಕಾಡನ್ನು ಅನಾದಿಕಾಲದಿಂದಲೂ ಉಳಿಸಿಕೊಂಡು ಬರಲಾಗಿದೆ. ಮತ್ತೆ ಕಸ್ತೂರಿ ರಂಗನ್ ವರದಿ ಹೇರಿಕೆಯಿಂದ ಸಮಸ್ಯೆ ಆರಂಭವಾಗಲಿದೆ ಹೊರತೂ ಬೇರಾವ ಪ್ರಯೋಜನವಾಗುವುದಿಲ್ಲ. ಪರಿಸರ ಸೂಕ್ಷ್ಮ ಪ್ರದೇಶ ಘೊಷಣೆಯಿಂದ ಜಿಲ್ಲೆಯ ಅಭಿವೃದ್ಧಿಯೇ ಸ್ಥಗಿತಗೊಳ್ಳುತ್ತದೆ. ರಾಜ್ಯದ 10 ಜಿಲ್ಲೆಯ ಸಂಸದರಿಗೂ ಪರಿಸ್ಥಿತಿಯ ವಾಸ್ತವತೆ ತಿಳಿದಿದೆ. ಸಂಸತ್​ನಲ್ಲಿ ಅವರು ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಮಾತನಾಡುವಂತೆ ಪತ್ರದಲ್ಲಿ ಆಗ್ರಹಿಸಲಿದ್ದೇನೆ ಎಂದರು.

ಪ್ರಶ್ನೆಗೆ ಉತ್ತರಿಸಿದ ಭೀಮಣ್ಣ, ಇದುವರೆಗೆ ಜಿಲ್ಲೆಯಲ್ಲಿ ಉಂಟಾದ ಭೂ ಕುಸಿತ ನೈಸರ್ಗಿಕವಾದುದಲ್ಲ. ಮಾನವ ರಸ್ತೆ ಅಥವಾ ಇನ್ನಿತರ ಕಾರ್ಯಕ್ಕೆ ಮಣ್ಣು ತೆಗೆದ ಸ್ಥಳದಲ್ಲಿ ಇಂತಹ ಅವಘಡಗಳು ಸಂಭವಿಸಿವೆ. ಶಿರಸಿ- ಕುಮಟಾ ರಸ್ತೆ ರಾಗಿಹೊಸಳ್ಳಿ ಬಳಿ ಕಳೆದ ಮಳೆಗಾಲದಲ್ಲಿ ಮಣ್ಣು ಕುಸಿತವಾದ ಸ್ಥಳದಲ್ಲಿಯೇ ಮುಂದಿನ ವರ್ಷವೂ ಮತ್ತೆ ಕುಸಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭೂ ಕುಸಿತವಾಗದಂತೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಶೀಘ್ರದಲ್ಲಿಯೇ ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಗುತ್ತಿಗೆದಾರರ ಸಭೆ ನಡೆಸಿ ರ್ಚಚಿಸಲಿದ್ದೇನೆ ಎಂದರು.

ನಗರ ಯೋಜನಾ ಘಟಕದ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ಎಸ್.ಕೆ. ಭಾಗ್ವತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net