

ಕೊಪ್ಪ: ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಕೊಪ್ಪ ಪಟ್ಟಣ ಪಂಚಾಯಿತಿಗೆ ನಗರೋತ್ಥಾನ ಹಾಗೂ ವಿಶೇಷ ಅನುದಾನದಲ್ಲಿ ಬಿಡುಗಡೆಯಾಗಿದ್ದ ಅನುದಾನವನ್ನು ಶಾಸಕರು ದೊರಕಿಸಲು ಪ್ರಯತ್ನಿಸಲಿ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ ವಸಂತ್ ತಿಳಿಸಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಗರೋತ್ಥಾನ ಅನುದಾನದಲ್ಲಿ 5 ಕೋಟಿ ರೂ. ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 2 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದರು. ನಂತರ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ಸರ್ಕಾರ ನಗರೋತ್ಥಾನದ 2.5ಕೋಟಿ ರೂ.ಅನುದಾನ ಹಾಗೂ ವಿಶೇಷ ಅನುದಾನ 2 ಕೋಟಿ ರೂ.ಅನುದಾನವನ್ನು ತಡೆಹಿಡಿದಿದೆ. ಈ ಅನುದಾನವನ್ನು ಶಾಸಕರು ತಕ್ಷಣದಲ್ಲಿ ಬಿಡುಗಡೆ ಮಾಡಿಸಲು ಪ್ರಯತ್ನಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾವು ವಿರೋಧ ಪಕ್ಷದವರನ್ನು ಒಗ್ಗೂಡಿಸಿಕೊಂಡು ಪಟ್ಟಣ ಅಭಿವೃದ್ಧಿ ಮಾಡಲು ಬದ್ದರಾಗಿದ್ದೇವೆ. ಆದರೇ ಅನುದಾನ ನೀಡಲು ಶಾಸಕರು ಹಿಂದೇಟು ಹಾಕುತ್ತಿದ್ದಾರೆ. ಕೊಪ್ಪ ಪಟ್ಟಣದ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸುತ್ತಿಲ್ಲ. ಹುಚ್ಚುರಾಯರ ಕೆರೆ ಮೇಲ್ಬಾಗದಲ್ಲಿ ನಿರ್ಮಾಣವಾಗುತ್ತಿರುವ ಲೇಔಟ್ ನಿಂದ ಕೆರೆಗೆ ಅಪಾಯವಿದೆ. ಈ ಕುರಿತು ಶಾಸಕರಿಗೆ ಪತ್ರ ಬರೆಯಲಾಗಿದೆ. ಇದಕ್ಕೆ ಶಾಸಕರಿಂದ ಪ್ರತಿಕ್ರಿಯೆ ಬಂದಿಲ್ಲ. ಶಾಸಕರ ಈ ನಡೆ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪಟ್ಟಣದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ದುರಸ್ತಿಗೂ ಅನುದಾನ ನೀಡುತ್ತಿಲ್ಲ ಎಂದು ದೂರಿದರು.
ಪಪಂ ಉಪಾಧ್ಯಕ್ಷೆ ಗಾಯತ್ರಿ ಶೆಟ್ಟಿ, ಸದಸ್ಯರಾದ ರೇಖಾ ಪ್ರಕಾಶ್, ಇದಿನಬ್ಬ ಇದ್ದರು.