ಶೃಂಗೇರಿ ಪಟ್ಟಣ ಪಂಚಾಯಿತಿ ಅಭಿವೃದ್ಧಿಗೆ ಶಾಸಕರು ಕೈ ಜೋಡಿಸಲಿ

H.S.Venugopal
Published on

ಶೃಂಗೇರಿ: ಸರ್ಕಾರದ ಅನುದಾನವಿಲ್ಲದೇ ಪಟ್ಟಣದ ಅಭಿವೃದ್ಧಿ ಕುಂಠಿತಗೊಂಡಿದ್ದು, ಪವಿತ್ರ ಕ್ಷೇತ್ರ ಶೃಂಗೇರಿಗೆ ಬರುವ ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಪಟ್ಟಣದ ಅಭಿವೃದ್ಧಿಗೆ ಪಪಂ ಜತೆಗೆ ಶಾಸಕ ಟಿ.ಡಿ.ರಾಜೇಗೌಡ ಅವರು ಕೈ ಜೋಡಿಸಬೇಕು ಎಂದು ಪಪಂ ಅಧ್ಯಕ್ಷ ಎಚ್.ಎಸ್.ವೇಣುಗೋಪಾಲ್ ಹೇಳಿದರು.
ಪಪಂ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸಭೆ ನಡೆಸಿದರೂ ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡುವ ವಿಷಯ ಕುರಿತು ಚರ್ಚೆ ನಡೆಸಬೇಕು ಎಂಬ ಆಶಯ ನಮ್ಮದಾಗಿದೆ. ವಿರೋಧ ಪಕ್ಷದ ಸದಸ್ಯರು, ನಾಮಿನಿ ಸದಸ್ಯರು ಸಭೆ ಅಜೆಂಡಾದಲ್ಲಿ ಇರುವ ವಿಷಯವನ್ನು ಬಿಟ್ಟು ಚರ್ಚೆ ಮಾಡುತ್ತಾರೆ ಎಂದು ಆರೋಪಿಸಿದರು.
ನಿವೃತ್ತಿಗೆ ನಾಲ್ಕು ತಿಂಗಳು ಬಾಕಿ ಇರುವ ಮುಖ್ಯಾಧಿಕಾರಿ ಶ್ರೀಪಾದರಾವ್ ಅವರನ್ನು ಸ್ಥಳವನ್ನು ಸೂಚಿಸದೇ ವರ್ಗಾವಣೆ ಮಾಡಲಾಗಿದೆ. ಒಬ್ಬ ಅಧಿಕಾರಿಯನ್ನು 24 ಗಂಟೆ ಒಳಗೆ ವರ್ಗಾವಣೆ ಮಾಡುವ ಶಾಸಕರು ಪಪಂನಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದ್ದರೂ ಅಧಿಕಾರಿಗಳನ್ನು ನೇಮಕ ಮಾಡುತ್ತಿಲ್ಲ. ಎನ್.ಆರ್.ಪುರ, ಕೊಪ್ಪ ತಾಲೂಕಿಗೆ ಅನುದಾನ ಹರಿದು ಬರುತ್ತಿದ್ದು ಶಾಸಕ ರಾಜೇಗೌರು ಶೃಂಗೇರಿ ಕ್ಷೇತ್ರವನ್ನು ನಿರ್ಲಕ್ಷ್ಯಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ಆರೂವರೆ ವರ್ಷದಿಂದ ಯಾವುದೇ ಅನುದಾನ ಲಭ್ಯವಿಲ್ಲ. ಅಧ್ಯಕ್ಷರ ಅಪ್ಪಣೆ ಇಲ್ಲದೇ ಸಭಾ ನಿರ್ಣಯದ ಪುಸ್ತಕ ತೋರಿಸಿ ಎಂದು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಪಪಂ ವಿರೋಧ ಪಕ್ಷದ ಸದಸ್ಯರ ವರ್ತನೆ ನಮಗೆ ಅಭಿವೃದ್ಧಿ ಕಾರ್ಯ ನಿರ್ವಹಿಸಲು ತೊಡಕು ಉಂಟಾಗುತ್ತಿದೆ. ಸಿಬ್ಬಂದಿ ಕೊರತೆ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಅವರು ಸ್ಪಂದಿಸದಿದ್ದಲ್ಲಿ ನಾವು ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಉಪಾಧ್ಯಕ್ಷ ಎಂ.ಎಲ್.ಪ್ರಕಾಶ್ ಮಾತನಾಡಿ, ಪಟ್ಟಣದ ರಸ್ತೆಗಳು ಗುಂಡಿಮಯವಾಗಿದೆ. ಬೀದಿ ದೀಪಗಳ ನಿರ್ವಹಣೆ ಇಲ್ಲದೆ ಹಾಳಾಗಿವೆ. ಅನುದಾನ ಇಲ್ಲದೆ ನಾವು ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು. ಪ.ಪಂ ಸದಸ್ಯರಾದ ರತ್ನಾಕರ್ ಶೆಟ್ಟಿ, ಹರೀಶ್.ವಿ.ಶೆಟ್ಟಿ, ಬಿ.ಅರುಣ,ರಾಧಿಕಾ, ಶ್ರೀವಿದ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net