

ಬೆಳಗಾವಿ: ನಗರದಲ್ಲಿ ಪಾರ್ಟ್ಹೋಲ್ ಫಿಲ್ಲಿಂಗ್ (ಗುಂಡಿ ಮುಚ್ಚುವ)ಗಾಗಿ ನಾಲ್ಕೆ$ದು ಬಾರಿ ಅನುದಾನ ಬಳಸಿಕೊಂಡರೂ ಗುಂಡಿಗಳು ಮುಚ್ಚಿಲ್ಲ. ಅವೈಜ್ಞಾನಿಕ, ಅರೆಬರೆ ಕಾಮಗಾರಿಯಿಂದ ಲಕ್ಷಾಂತರ ರೂ.ಅನುದಾನ ದುರ್ಬಳಕೆಯಾಗುತ್ತಿದ್ದು, ತನಿಖೆಗೆ ಒಳಪಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆ ಲೋಕೋಪಯೋಗಿ ವಿಭಾಗ ಇಂಜಿನಿಯರ್ಗಳು ಮಾತನಾಡಿ, ದಕ್ಷಿಣ, ಉತ್ತರ ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ದುರಸ್ತಿ, ವಾರ್ಷಿಕ ನಿರ್ವಹಣೆಗೆ 2.13 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಈಗಾಗಲೇ ಶೇ.60 ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿ ಪ್ರಗತಿಯಲ್ಲಿವೆ. ಕಳಪೆ ಕಾಮಗಾರಿ ಕುರಿತು ಖುದ್ದಾಗಿ ಪರಿಶೀಲಿಸಿ ವರದಿ ಸಲ್ಲಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಭೂ ಬಾಡಿಗೆ ಹೆಚ್ಚಳಕ್ಕೆ ಆಕ್ಷೇಪ: ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಬದಿ, ತಳ್ಳುಗಾಡಿ ವ್ಯಾಪಾರ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಿಗಳಿಂದ ಗುತ್ತಿಗೆದಾರರು ಬೇಕಾಬಿಟ್ಟಿ ಭೂ ಬಾಡಿಗೆ ವಸೂಲಿ ಮಾಡುತ್ತಿದ್ದು, ಪಾಲಿಕೆಗೆ ವಾರ್ಷಿಕ ಲಕ್ಷಾಂತರ ರೂ. ನಷ್ಟವಾಗುತ್ತಿದ್ದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಭೂ ಬಾಡಿಗೆ ದರದ ನಾಮಫಲಕಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು. ಏಕಾಏಕಿ ಭೂ ಬಾಡಿಗೆ ಹೆಚ್ಚಳ ಸರಿಯಾದ ಕ್ರಮವಲ್ಲ, ಮತ್ತೊಮ್ಮೆ ಪರಿಷ್ಕರಿಸಬೇಕು ಎಂದು ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತೆ ಶುಭ ಬಿ., ಪ್ರತಿ ದಿನ ರಸ್ತೆ ಬದಿ ಕುಳಿತುಕೊಂಡು ವ್ಯಾಪಾರ ಮಾಡುವವರಿಗೆ 10 ರೂ., ತಳ್ಳುಗಾಡಿ ವ್ಯಾಪಾರಿಗಳಿಗೆ 50 ರೂ. ಹಾಗೂ ಬೇಲ್ಪುರಿ, ಪಾಣಿಪುರಿ, ಎಗ್ರೈಸ್, ಎಳೆನೀರು ಮಾರಾಟ ಮಾಡುವವರಿಗೆ 100 ರೂ. ದಿನದ ಬಾಡಿಗೆ ನಿಗದಿಪಡಿಸಿ ಗುತ್ತಿಗೆ ನೀಡಲಾಗಿದೆ. ಈಗಾಗಲೆ ಗುತ್ತಿಗೆದಾರರು ಪಾಲಿಕೆಗೆ 1.42 ಕೋಟಿ ರೂ. ಮುಂಗಡವಾಗಿ ಪಾವತಿಸಿದ್ದಾರೆ. ಒಂದು ವೇಳೆ ನಿಗದಿಪಡಿಸಿದ ದರಕ್ಕೆ ಹೆಚ್ಚುವರಿ ವಸೂಲಿ ಮಾಡಿದರೆ ಗುತ್ತಿಗೆದಾರನ ಟೆಂಡರ್ ರದ್ದುಪಡಿಸುತ್ತೇವೆ. ಭೂ ಬಾಡಿಗೆ ವಸೂಲಿ ಮಾಡುವ ಸಿಬ್ಬಂದಿಗೆ ಕಡ್ಡಾಯವಾಗಿ ಡ್ರೇಸ್ ಕೋಡ್, ಗುರುತಿನ ಚೀಟಿ ಪ್ರದರ್ಶಿಸಬೇಕು. ಬಾಡಿಗೆ ವಸೂಲಿಯಲ್ಲಿ ಏರುಪೇರು ಕುರಿತು ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ ಹಣಮಂತ ಕೊಂಗಾಲಿ ಇತರರಿದ್ದರು.