

ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಬಹಳ ಸಂತೋಷ ಪಟ್ಟ ಅಲ್ಪಸಂಖ್ಯಾತ ಸಮುದಾಯದವರು ಈಗ ಅವಲೋಕನ ಮಾಡಿಕೊಳ್ಳಬೇಕಾದ ಸ್ಥಿತಿಯಲ್ಲಿದ್ದಾರೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮಜಿದ್ ತುಂಬೆ ಹೇಳಿದರು.
ನಗರದ ಬನ್ನಿಮಂಟಪದ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಪಕ್ಷದ ಜಿಲ್ಲಾ ಘಟಕಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.ಕಳೆದ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಬೆಂಬಲಿಸಿ ಅಧಿಕಾರಕ್ಕೆ ಬರಲು ಕಾರಣಕರ್ತರಾದರು. ಇದರಿಂದ ಸಂತೋಷಪಟ್ಟರು. ಆದರೆ ಮುಖಂಡರು ಯು ಟರ್ನ್ ಹೊಡೆಯುತ್ತಿರುವುದರಿಂದ ಈಗ ಇರುವುದು ಜಾತ್ಯತೀತ ಸರ್ಕಾರವೇ ಎನ್ನುವ ಅನುಮಾನ ಮೂಡಿದ್ದು, ಅಲ್ಪ ಸಂಖ್ಯಾತರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿ ಬಂದಿದೆ ಎಂದರು.
ಸರ್ಕಾರದ ನಾಯಕತ್ವದಲ್ಲಿ ದಮ್ಮು ಇಲ್ಲ. ಬಿಜೆಪಿಯ ಐಟಿ ಸೆಲ್ಗೆ ಹೆದರುತ್ತಿದೆ. ಗೋಮಾಂಸ, ಹಿಜಾಬ್ ಬಗ್ಗೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಿಲ್ಲ. ಒಳ ಮೀಸಲಾತಿ ಇನ್ನೂ ಜಾರಿಗೊಳಿಸದೆ ಅಲ್ಪಸಂಖ್ಯಾತರನ್ನು ಮಂಗ ಮಾಡುತ್ತಿದೆ ಎಂದು ದೂರಿದರು.
ಶ್ರೀರಾಮ ಸೇನೆಯವರು ಬಂದೂಕು ಹಿಡಿದು ತಿರುಗಾಡಿದರೂ ಕೇಸ್ ಹಾಕಲು ಕೂಡ ಹಿಂದೆ ಮುಂದೆ ನೋಡಲಾಗುತ್ತಿದೆ. ಆದರೆ ನಮ್ಮ ಮೇಲೆ ಸುಮ್ಮನೆ ಕೇಸ್ ಹಾಕುತ್ತಾರೆ. ಹಾಗಾಗಿ ಪಕ್ಷವನ್ನು ಬಲಪಡಿಸಿ ದಲಿತರ ಮೇಲೆ ಹಲ್ಲೆ, ಚರ್ಚ್, ಮಸೀದಿ ಮೇಲೆ ದಾಳಿ ವಿರುದ್ಧ ಹೋರಾಟ ಮಾಡಬೇಕು ಎಂದರು.
ಅಲ್ಪ ಸಂಖ್ಯಾತರ ಧ್ವನಿ ಅಡಗಿಸಲು ಎಲ್ಲ ಪಕ್ಷಗಳಿಂದ ಪ್ರಯತ್ನ ನಡೆಯಿತು. 15 ವರ್ಷಗಳ ಹಿಂದೆ ಅಲ್ಪಸಂಖ್ಯಾತ ಸಮುದಾಯಕ್ಕೆ ನಾಯಕತ್ವ ಇರಲಿಲ್ಲ. ಆದರೆ ಈಗ ಹೊಸ ನಾಯಕರನ್ನು ರಾಷ್ಟ್ರಮಟ್ಟದಲ್ಲಿ ನೋಡಲು ಸಾಧ್ಯವಾಗುತ್ತಿದೆ. ಅಲ್ಪಸಂಖ್ಯಾತರ ಧ್ವನಿಯಾಗಿ ಎಸ್‌ಡಿಪಿಐ ಇದ್ದು, 15 ಜಿಲ್ಲೆಗಳಲ್ಲಿ ಮಾತ್ರ ಇದ್ದ ಸಂಘಟನೆ ಈಗ 31 ಜಿಲ್ಲೆಗಳಿಗೆ ವಿಸ್ತರಿಸಿ ಬಲಗೊಂಡಿದೆ ಎಂದು ಹೇಳಿದರು.
ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ರಫತ್‌ಖಾನ್ ಮಾತನಾಡಿ, ಬಿಜೆಪಿ ಕೋಮುವಾದಿ ಪಕ್ಷವಾದರೆ ಇನ್ನಿತರೆ ಪಕ್ಷಗಳು ಹೊಂದಾಣಿಕೆ ಪಕ್ಷಗಳಾಗಿವೆ. ಈಗ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದು, ಸಾಕಷ್ಟು ಕೆಲಸವಾಗಿದೆ. ಮುಂದಿನ ಹೊಸ ಸಮಿತಿಗಳು ಹೋರಾಟ, ಸಂಘಟನೆ ಮುಂದುವರಿಸಿಕೊಂಡು ಹೋಗಲಿವೆ ಎಂದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟ ನಂಜಯ್ಯ, ಮತ್ತೋರ್ವ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ, ರಾಜ್ಯ ಕಾರ್ಯದರ್ಶಿ ಮೌಲಾನಾ ಅಕ್ರಮ್, ರಾಜ್ಯ ಖಜಾಂಚಿ ಅಮ್ಜದ್‌ಖಾನ್, ಜಿಲ್ಲಾ ಉಪಾಧ್ಯಕ್ಷ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿವುಲ್ಲಾ, ಜಿಲ್ಲಾ ಕಾರ್ಯದರ್ಶಿ ಫರ್ದಿನ್ ಅಹಮದ್, ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಆಯಿಷಾ ಜಬಿ, ಜಿಲ್ಲಾ ಖಜಾಂಚಿ ಎಂ. ಎನ್ ಫಿರ್ದೋಸ್, ಮುಖಂಡ ಸಯ್ಯದ್ ಅಕ್ಬರ್ ಹುಣಸೂರು ಇತರರು ಇದ್ದರು.