

ಕನಕಗಿರಿ: ವಕ್ಫ್ ಬೋರ್ಡ್‌ನಿಂದ ರೈತರಿಗೆ ಆಗುತ್ತಿರುವ ತೊಂದರೆ ಖಂಡಿಸಿ ಹಾಗೂ ಇತರೇ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ತಾಲೂಕು ಅಧ್ಯಕ್ಷ ಗಣೇಶರೆಡ್ಡಿ ಮಾತನಾಡಿ, ವಕ್ಫ್ ಬೋರ್ಡ್ ಕೇವಲ ಕರ್ನಾಟಕ ಅಲ್ಲ, ಭಾರತದಲ್ಲೂ ರೈತರ ವಿಚಾರವಾಗಿ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು, ಇದು ಕೊನೆಗೊಳ್ಳಬೇಕು. ರೈತರ ಉಳಿಮೆ ಮಾಡುವ ಭೂಮಿಯನ್ನು ರೈತರಿಗೆ ಬಿಟ್ಟುಕೊಡಬೇಕು. ರಾಜ್ಯದ ವಕ್ಫ್ ಸಚಿವರು ರಾಜ್ಯದ ರೈತರ ಕ್ಷಮೆ ಕೇಳಬೇಕು. ಮುಖ್ಯಮಂತ್ರಿಗಳು ವಕ್ಫ್ ಸಚಿವರನ್ನು ಸಂಪುಟದಿಂದ ಸ್ಥಾನದಿಂದ ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು.
ತುಂಗಭದ್ರಾ ಜಲಾಶಯದಲ್ಲಿ ನೀರಿದ್ದರೂ ಸಹ ಕನಕಗಿರಿಯ ಕೆರೆ ತುಂಬಿಸುವ ಯೋಜನೆಯಡಿ ಕೆರೆ ತುಂಬದೇ ರೈತರು ಯಾವಾಗ ಕೆರೆಗಳು ತುಂಬುತ್ತವೆ ಎಂದು ಕಾದು ಕುಳಿತಿದ್ದು, ಅಧಿಕಾರಿಗಳು ಕೆರೆ ತುಂಬಿಸಲು ಮುಂದಾಗಬೇಕು. ರೈಸ್ ಟೆಕ್ನಾಲಜಿ ಪಾರ್ಕ್ ಹೆಸರಲ್ಲಿ ನೂರಾರು ಎಕರೆ ರೈತರ ಜಮೀನು ಪಡೆದುಕೊಂಡಿದೆ. ಆದರೆ, ರೈಸ್ ಟೆಕ್ನಾಲಜಿ ಪಾರ್ಕ್ ಜೀವ ಕಳೆದುಕೊಂಡಿದ್ದು, ರೈಸ್ ಟೆಕ್ ಪಾರ್ಕ್ ಆರಂಭಿಸಿ ಕ್ಷೇತ್ರದ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ಇಲ್ಲಿನ ಎದುರು ಹನುಮಪ್ಪ ದೇವಸ್ಥಾನದಿಂದ ರಾಜಬೀದಿಯ ಮೂಲಕ ಪ್ರತಿಭಟನಾ ಮೆರವಣಿಗೆ ನಡೆದು ವಾಲ್ಮೀಕಿ ವೃತ್ತದಲ್ಲಿ ಸಭೆ ನಡೆದು ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಮನವಿ ಸಲ್ಲಿಸಲಾಯಿತು.