

ರಟ್ಟಿಹಳ್ಳಿ: ರೈತರ ಆತ್ಮಹತ್ಯೆ ಕುರಿತು ಹೇಳಿಕೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ರೈತರ ಕ್ಷಮೆಯಾಚಿಸಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಶಂಕ್ರುಗೌಡ ಶಿರಗಂಬಿ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ರೈತರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರೈತ ಸಂಘದ ವತಿಯಿಂದ ಸೆ. 13ರಂದು ಕೈಗೊಂಡಿರುವ ಪ್ರತಿಭಟನೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
5 ಲಕ್ಷ ರೂಪಾಯಿ ಪರಿಹಾರ ನೀಡುತ್ತಿರುವುದರಿಂದ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂಬ ಸಚಿವ ಶಿವಾನಂದ ಪಾಟೀಲರ ಹೇಳಿಯಿಂದ ರೈತರ ಮನಸ್ಸಿಗೆ ತೀವ್ರ ನೋವುಂಟಾಗಿದೆ. ಪ್ರಸ್ತುತ ರೈತರು ಬರಗಾಲದಿಂದ ಬೇಸತ್ತು ಹೋಗಿದ್ದಾರೆ ಮತ್ತು ಸಂಕಷ್ಟದಲ್ಲಿದ್ದರೆ, ಯಾವುದೇ ರೈತರು ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ರೈತರ ಸಮಸ್ಯೆ ಆಲಿಸುತ್ತಿಲ್ಲ. ಯಾವುದೇ ತಾಲೂಕಿಗೆ ಭೇಟಿ ನೀಡದಿರುವುದು ವಿಪರ್ಯಾಸ. ಕೂಡಲೇ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಕೈಬಿಡಬೇಕು. ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ನೀಡಿ, ಉಸ್ತುವಾರಿ ನೀಡಬೇಕು ಎಂದರು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ ಶಂಭು ಮುತ್ತಗಿ, ಫಯಾಜಸಾಬ್ ದೊಡ್ಮನಿ, ಬಸವರಾಜ ಬಣಕಾರ, ರಾಜು ಮುತ್ತಗಿ, ಮಂಜನಗೌಡ ಸಣ್ಣಗೌಡ್ರ, ಮಂಜಣ್ಣ ಬಾಗೋಡಿ, ರುದ್ರೇಶ ದ್ಯಾವಕ್ಕಳವರ, ಚಂದ್ರಪ್ಪ ಅಂಗಡಿ, ಮಲ್ಲೇಶಪ್ಪ ಸಿರಗೇರಿ, ಬಸವರಾಜ ಸತ್ತಗೀಹಳ್ಳಿ, ಅಶೋಕ ಚಲವಾದಿ ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.