

ಚಿಮ್ಮಡ: ಇಂದಿನ ಆಧುನಿಕ ಯುಗದಲ್ಲಿ ಆಹಾರ ಪದಾರ್ಥಗಳು ಸಂಪೂರ್ಣ ಕಲಬೆರಕೆಯಿಂದ ಕೂಡಿದ್ದು, ಗುಡಿ ಕೈಗಾರಿಕೆಗಳಿಂದ ದೊರೆಯುತ್ತಿದ್ದ ಶುದ್ಧ ಆಹಾರ ಮರೀಚಿಕೆ ಆಗಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.
ಗ್ರಾಮದ ಪ್ರಭುಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ನೂತನ ಗಾಣಿಗದೇವಿ ದೇವಸ್ಥಾನದ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಾಲು, ಅಡುಗೆ ಎಣ್ಣೆ ಸೇರಿ ಪ್ರತಿಯೊಂದು ಆಹಾರ ಪದಾರ್ಥಗಳು ಇಂದು ಕಲಬೆರಕೆಯಿಂದ ಕೂಡಿವೆ. ಗಾಣಿಗರು ಮತ್ತೆ ತಮ್ಮ ವೃತ್ತಿಗೆ ಮರಳುವ ಅನಿವಾರ್ಯತೆ ಇದ್ದು, ಈ ಮೂಲಕ ಸಮಾಜಕ್ಕೆ ಶುದ್ಧ ಅಡುಗೆ ಎಣ್ಣೆ ಪೂರೈಸುವ ಕಾರ್ಯಕ್ಕೆ ಚಾಲನೆ ನೀಡಬೇಕಿದೆ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ ಮಾತನಾಡಿ, ಸೌಹಾರ್ದತೆಯಿಂದ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗಿದೆ ಎಂದರು.
ಜಮಖಂಡಿ ಓಲೆಮಠದ ಡಾ. ಅಭಿನವ ಚನ್ನಬಸವ ಮಹಾಸ್ವಾಮಿಗಳು, ಸ್ಥಳೀಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು, ಕೋಲ್ಹಾರ ದಿಗಂಬರೇಶ್ವರ ಸಂಸ್ಥಾನ ಮಠದ ಯೋಗಿ ಕಲ್ಲಿನಾಥ ದೇವರು, ಕೊಪ್ಪಳ ವನಕೇರಿ ಆಶ್ರಮದ ಯಶವಂತ ಶರಣರು, ರಘುನಾಥ ಪ್ರಿಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ದನ ಮಹಾರಾಜರು ಆಶೀರ್ವಚನ ನೀಡಿದರು.
ವಿದ್ಯಾಧರ ಸವದಿ, ರಾಹುಲ್ ಕಲೂತಿ, ಬಸವಪ್ರಭು ಸರನಾಡಗೌಡ, ಲಕ್ಷ್ಮಣ ಚಿನ್ನಣ್ಣವರ, ಸುನೀಲ ಕಡಪಟ್ಟಿ, ವಿಜಯಕೃಷ್ಣ ಗಾಣಿಗೇರ, ಹಣಮಂತ ತೇಲಿ, ಶ್ರೀಶೈಲ ಬಿ.ಪಾಟೀಲ, ಸುರೇಶ ಅಸ್ಕಿ, ಮಹಾಲಿಂಗ ತೇಲಿ, ಬಿ.ಎಸ್. ಪಾಟೀಲ, ಬಾಳಪ್ಪ ಹಳಿಂಗಳಿ, ರಾಮಣ್ಣ ಬಗನಾಳ, ಅಣ್ಣಪ್ಪಗೌಡ ಪಾಟೀಲ ಇತರರಿದ್ದರು. ಇದೇ ವೇಳೆ ಹಲವಾರು ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಶಿಕ್ಷಕ ಪ್ರಕಾಶ ಬಡಿಗೇರ ಸ್ವಾಗತಿಸಿ, ವಂದಿಸಿದರು.