

ಜಮಖಂಡಿ: ವಿಷಯಾತೀತ ಆನಂದ ಅನುಭವಿಸಲು ಮಾಯೆಯನ್ನು ಮೀರಿ ಮನಸ್ಸು ಅಂತರ್ಮುಖಿಯಾಗಬೇಕು. ಅದಕ್ಕೆ ಸತ್ಸಂಗದ ಅವಶ್ಯಕತೆಯಿದೆ ಎಂದು ಲಿಂಗನೂರಿನ ಅವಧೂತ ಮಠದ ಶಿವಪುತ್ರ ಅವಧೂತರು ಹೇಳಿದರು.
ತಾಲೂಕಿನ ಹುಲ್ಯಾಳ ಗ್ರಾಮದ ಗುರುದೇವಾಶ್ರಮದ ಶ್ರೀ ಗುರುದೇವ ಸತ್ಸಂಗ ಬಳಗ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಗುರುದೇವ ಸತ್ಸಂಗದ ಮಾ.23ರ ಮಾಸಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹುಲ್ಯಾಳ ಶ್ರೀ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಬ್ರಹ್ಮಜ್ಞಾನ ಕ್ಷಣಿಕವಲ್ಲ. ಆದರೆ, ಬರಿ ಬ್ರಹ್ಮಜ್ಞಾನದಿಂದ ಸುಖವಿಲ್ಲ. ನಿರಂತರವಾಗಿ ಸುಖ ಪಡೆಯಲು ಬ್ರಹ್ಮಜ್ಞಾನ ಅನುಭವ ಸಿದ್ಧಿಯಾಗಬೇಕು. ನಾನು ನನ್ನೊಳಗೆ ಇದ್ದಾಗ ಮಾತ್ರ ನಿಜವಾದ ಸುಖ ಪ್ರಾಪ್ತಿಯಾಗುತ್ತದೆ ಎಂದರು.
ಗುರುಬಸುಗೌಡ ಪಾಟೀಲ, ಪರಮೇಶ್ವರ ತೇಲಿ, ರಾಮಚಂದ್ರ ಹೂಗಾರ, ಸಿದ್ದು ಉಪ್ಪಲದಿನ್ನಿ, ಪುಂಡಲೀಕ ಭಜಂತ್ರಿ, ಶಿವಾನಂದ ಬಾಡನವರ ಸಂಗೀತ ಸೇವೆ ಸಲ್ಲಿಸಿದರು.
ಹೃಷಿಕೇಸಿಯ ಗಂಗಾನಂದ ಮಹಾರಾಜರು, ಶ್ರೀ ಗುರುದೇವಾಶ್ರಮದ ಪುಂಡಲೀಕ ಶಾಸೀಗಳು ಸಾನ್ನಿಧ್ಯ ವಹಿಸಿದ್ದರು. ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೃಥ್ವೀರಾಜ ಹೊನಗೌಡ ಕಾರ್ಯಕ್ರಮ ನಿರ್ವಹಿಸಿದರು.