ವಿಜ್ಞಾನ ಕ್ಷೇತ್ರದತ್ತ ಇರಲಿ ಯುವಕರ ಚಿತ್ತ

MLK VIGNANA 09
Published on

ಮೊಳಕಾಲ್ಮೂರು: ವಿಜ್ಞಾನ ಮತ್ತು ತಂತ್ರಜ್ಞಾನ ಲೋಕದತ್ತ ಯುವಪೀಳಿಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡು, ಹೊಸ ಅವಿಷ್ಕಾರಗಳ ಮನೋ ಚಿಂತನೆ ಮೂಲಕ ಭಾರತ ಉತ್ತುಂಗದ ಶಿಖರವೇರಲು ಕೊಡುಗೆ ನೀಡಬೇಕು ಎಂದು ಬಿಇಒ ಕೆ.ತಿಪ್ಪೇಸ್ವಾಮಿ ಹೇಳಿದರು.

ಪಟ್ಟಣದ ಚೈತನ್ಯ ಪಬ್ಲಿಕ್ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಮೆಗಾಲಿಡುತ್ತಿದ್ದ ಭಾರತ, ಚಂದ್ರನ ಅಂಗಳಕ್ಕೆ ಪ್ರವೇಶ ಮಾಡುವ ಮೂಲಕ ಜಗತ್ತೇ ನಮ್ಮ ಕಡೆ ನೋಡುವ ರೀತಿ ಬಹುದೊಡ್ಡ ಸಾಧನೆ ಮಾಡಿದೆ ಎಂದರು.

ಈ ಕಾರ್ಯಚರಣೆಯಿಂದ ವಿಜ್ಞಾನವನ್ನು ಇನ್ನಷ್ಟು ಅಧ್ಯಯನ ಮಾಡಲು ದೇಶದ ಪ್ರತಿಭಾನ್ವಿತ ಮಕ್ಕಳ ಬೌದ್ಧಿಕ ಬುದ್ಧಿ ಶಕ್ತಿ ವಿಕಾಸಕ್ಕೆ ಸ್ಫೂರ್ತಿ ಆಗಿದೆ ಎಂದ ಅವರು, ಪ್ರಾಥಮಿಕ ಹಂತದಲ್ಲೇ ಮಕ್ಕಳ ಮನಸ್ಸಿನಲ್ಲಿ ವೈಚಾರಿಕ ಚಿಂತನೆ ಜತೆಗೆ ವಿಜ್ಞಾನದತ್ತ ಆಸಕ್ತಿ ಬೆಳೆಸುವ ಕಾರ್ಯ ಪಾಲಕರು, ಶಿಕ್ಷಕರು ಮಾಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಚೈತನ್ ಶಾಲೆಯ ಕಾರ್ಯದರ್ಶಿ ವನಿತಾ ಗಿರೀಶ್ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಪಾಠ, ಪ್ರವಚನ ಹಾಗೂ ಹೊಸ ಅವಿಷ್ಕಾರಗಳ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಸಾಧನೆ ಮಾಡುತ್ತಿದ್ದು, ಶಿಕ್ಷಕರನ್ನೇ ಬೆರಗುಗೊಳಿಸುವ ರೀತಿ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ ಎಂದು ತಿಳಿಸಿದರು.

ವಿಜ್ಞಾನ, ಗಣಿತ ಕಬ್ಬಿಣದ ಕಡಲೆಯಲ್ಲ. ಆಸಕ್ತಿ ಬೆಳೆಸಿಕೊಂಡು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಂಡರೆ ಸಾಧನೆ ಹಾದಿ ಸುಲಭ ಎಂದ ಅವರು, ಎರಡು ದಿನಗಳಿಗೆ ಮೇಳ ಸೀಮಿತಗೊಳ್ಳಬಾರದು. ವಿಶೇಷವಾಗಿ ಗ್ರಾಮೀಣ ಪ್ರದೇಶಕ್ಕೆ ಇಂತಹ ಕಾರ್ಯಕ್ರಮ ಕೊಂಡೊಯ್ಯುವ ಕೆಲಸ ಆಗಬೇಕು ಎಂದರು.

ವಿಜ್ಞಾನ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ವಸಂತಕುಮಾರ, ಸಮನ್ವಯ ಅಧಿಕಾರಿ ಲೋಹಿತ್‌ಕುಮಾರ, ಸಿಆರ್‌ಪಿ ಮೊಹನ್, ಮುಖ್ಯಶಿಕ್ಷಕ ಶಶಿಕುಮಾರ, ಸಹ ಶಿಕ್ಷಕರಾದ ಗೀತಾ, ಭಾಗ್ಯಮ್ಮ, ಪ್ರಿಯಾಂಕಾ, ಅನಿತಾ, ಉಮಾ, ವನಜಾಕ್ಷಿ, ಅಶೋಕ್, ನುಸರತ್ ಇದ್ದರು.

ಸರ್ವೋದಯ ಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net