

ಶಿಕಾರಿಪುರ: ಮನಸ್ಸು ಶುಭ್ರವಾದ ಬಟ್ಟೆಯಂತೆ ರಾಗ-ದ್ವೇಷಗಳೆಂಬ ಕೊಳಕು ಮುಕ್ತವಾಗಿರಬೇಕು ಎಂದು ಚಿತ್ರದುರ್ಗದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.
ತಾಲೂಕಿನ ಹೋತನಕಟ್ಟೆ ಗ್ರಾಮದಲ್ಲಿ ಮಡಿವಾಳ ಸಮಾಜ ಮತ್ತು ಮಡಿವಾಳ ಮಾಚಿದೇವ ಸಂಘ ಭಾನುವಾರ ಸಂಜೆ ಆಯೋಜಿಸಿದ್ದ ಮನೆ ಮನೆಗೆ ಮಾಚಿದೇವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾಚಿದೇವರು ಅತ್ಯಂತ ಪರಿಶುದ್ಧವಾದ ಕಾಯಕ ನಿಷ್ಠ ಶರಣರಾಗಿದ್ದರು. ಅತ್ಯಂತ ಸ್ವಾಭಿಮಾನಿ ಮತ್ತು ಸಮಾಜದ ಕಟ್ಟು-ಪಾಡುಗಳನ್ನು, ಅತಿಯಾದ ಮೌಢ್ಯಗಳನ್ನು ತಮ್ಮ ವಚನಗಳಲ್ಲಿ ಕಟುವಾಗಿ ಟೀಕಿಸಿ, ಸಾಮಾಜಿಕ ಕಳಕಳಿ ಬಿಂಬಿಸಿದ ಮಹಾ ಶರಣರು ಎಂದು ಬಣ್ಣಿಸಿದರು.
ಮನೆ ಮನೆಯಲ್ಲಿಯೂ ಮಾಚಿದೇವರ ಬದುಕಿನ ಹೆಜ್ಜೆಗಳ ಬಿಂಬಿಸುವ ಮತ್ತು ಅವರ ವಚನಗಳ ಪುಸ್ತಕ ಇರಬೇಕು. ಅವರ ಒಂದೊಂದು ವಚನವೂ ಒಂದೊಂದು ಗ್ರಂಥಕ್ಕೆ ಸಮನಾಗಿವೆ. ಅವರ ಕೆಲವೇ ವಚನಗಳು ಲಭ್ಯವಾಗಿವೆ. ನಮ್ಮ ಮುಂದಿನ ಪೀಳಿಗೆಗೆ ಶರಣರ ಬದುಕು, ಕಾಯಕ ನಿಷ್ಠೆ, ಸಹಬಾಳ್ವೆ, ಸೌಹಾರ್ದತೆಯಂತಹ ಶ್ರೇಷ್ಠ ಗುಣಗಳ ಪರಿಚಯ ಇರಬೇಕು ಎಂದು ಹೇಳಿದರು.
ಮಡಿವಾಳ ಸಮಾಜ ಅತ್ಯಂತ ಸಹೃದಯಿ, ಸ್ವಾಭಿಮಾನಿ ಮತ್ತು ಸಂಯಮಿ ಸಮಾಜವಾಗಿದೆ. ನಮ್ಮ ಸಮಾಜಕ್ಕೆ ಸಂಘಟನಾತ್ಮಕ ಶಕ್ತಿಯ ಬಲದ ಅಗತ್ಯವಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ. ನಾವು ನಮ್ಮ ಮಕ್ಕಳಿಗೆ ಮೊದಲು ಕೂಡಿಸುವ ಮತ್ತು ಸಮಾಜ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸಮಾಜದ ಅಶಕ್ತರಿಗೆ, ದುರ್ಬಲ ಕುಟುಂಬಗಳಿಗೆ ನಾವು ಆಸರೆಯಾಗಬೇಕು ಎಂದರು.
ಈ ದಿನ ಸುದಿನ ಎಂದೇ ಭಾವಿಸುತ್ತೇನೆ. ಹೋತನಕಟ್ಟೆ ಗ್ರಾಮದ ಸಮಾಜ ಬಾಂಧವರು ಮನೆ ಮನೆಗೆ ಮಾಚಿದೇವ ಕಾರ್ಯಕ್ರಮದ ಮೂಲಕ ಹೊಸ ಸಂಚಲನ ಮೂಡಿಸಿದ್ದಾರೆ. ಸಂಘಟನೆಯಿಂದ ಮಾತ್ರ ಸಮಾಜ ಸಧೃಢವಾಗುತ್ತದೆ. ಎಲ್ಲಾ ಸಮಾಜಗಳ ಜತೆಗೆ ನಮ್ಮ ಮಡಿವಾಳ ಸಮಾಜ ಸದಾ ಅವಿನಾಭಾವ ಸಂಬಂಧ ಹೊಂದಿದೆ ಎಂದು ಹೇಳಿದರು.
ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ ಶ್ರೀಗಳಿಂದ ಫಲ, ಮಂತ್ರಾಕ್ಷತೆ ಪಡೆದರು.
ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ವೀರೇಂದ್ರ ಪಾಟೀಲ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾಗರಾಜು ಕೊರ್ಲಳ್ಳಿ, ತಾಲೂಕು ಮಡಿವಾಳ ಸಮಾದ ಅಧ್ಯಕ್ಷ ಲೋಕಪ್ಪ, ಕಾರ್ಯದರ್ಶಿ ಶಾಂತಪ್ಪ, ಹೋತನಕಟ್ಟೆ ಸಮಾಜದ ಅಧ್ಯಕ್ಷ ಗುರುಮೂರ್ತಿ, ಪ್ರಮುಖರಾದ ಗುರುಮೂರ್ತಿ, ಲಕ್ಷ್ಮಣ್ ಗೌಡ ಇತರರಿದ್ದರು.