

ಬೇಲೂರು: ಮಹಾನ್ ಪುರುಷರ ಸಂದೇಶಗಳನ್ನು ನಾಡಿನ ಜನ ಮನಕ್ಕೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಜಯಂತಿ ಕಾರ್ಯಕ್ರಮ ಆಯೋಜಿಸುತಿದ್ದು, ಈ ಕಾರ್ಯಕ್ರಮದಲ್ಲಿ ಗಣ್ಯರ ಭಾವಚಿತ್ರವಿಟ್ಟು ಪೂಜಿಸಿದರೆ ಸಾಲದು. ಅವರ ಸಂದೇಶಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ತಹಸೀಲ್ದಾರ್ ಎಂ.ಮಮತಾ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಿ.ದೇವರಾಜ ಅರಸು ಅವರು ಅಂದಿನ ಕಾಲದಲ್ಲೇ ಉತ್ತಮ ಶಿಕ್ಷಣ ಪಡೆದು ಕೃಷಿ ಬಗ್ಗೆ ಒಲವು ಹೊಂದಿದ್ದರು. ನಂತರದಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ದೀರ್ಘಕಾಲದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಅಲ್ಲದೆ ಉಳುವವನೇ ಭೂಮಿಯ ಒಡೆಯ, ಮಲ ಹೊರುವ ಪದ್ಧತಿ ನಿಷೇಧ ಸೇರಿದಂತೆ ಕಾಂತ್ರಿಕಾರಕ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಸಲ್ಲುತ್ತದೆ ಎಂದರು.
ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗದ ನೇತಾರರಾಗಿ ಬಡವರು, ನಿರ್ಗತಿಕರಿಗೆ ಸಹಾಯ ಮಾಡುವ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಅವುಗಳಲ್ಲಿ ಕೆಲವು ಇಂದಿಗೂ ಜಾರಿಯಲ್ಲಿವೆ. ವಿಶೇಷವಾಗಿ ಉತ್ತಮ ಸಂಸದಿಯ ಪಟುವಾಗಿದ್ದ ಅರಸು ಅವರ ವಿಚಾರಧಾರೆಗಳು ಮತ್ತು ಅವರಲ್ಲಿದ್ದ ಜನಪರ ಮತ್ತು ಸಾಮಾಜಿಕ ಚಿಂತನೆಗಳು ಯುವ ಜನತೆಗೆ ತಲುಪಬೇಕಿದೆ. ಆಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ ಎಂದರು.
ಪುರಸಭೆ ಅಧ್ಯಕ್ಷ ಎ.ಆರ್.ಆಶೋಕ್ ಮಾತನಾಡಿ, ಡಿ.ದೇವರಾಜು ಅರಸು ಅವರು ಮುತ್ಸದ್ಧಿ ರಾಜಕಾರಣಿಯಾಗಿದ್ದರು. ಅವರಿಂದ ಅಭಿವೃದ್ಧಿ ಕೆಲಸಗಳು ಮತ್ತು ಜನಪರ ಯೋಜನೆಗಳು ಇಂದಿಗೂ ಮಾದರಿಯಾಗಿದೆ. ದೂರದೃಷ್ಟಿ ರಾಜಕಾರಣಿ ಎಂದೇ ಹೆಸರು ಪಡೆದ ಡಿ.ದೇವರಾಜ ಅರಸು ಅವರು ಗ್ರಾಮೀಣ ಜನರ ಪಾಲಿನ ದೇವರು ಎಂದೇ ಕರೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ವಿದ್ಯಾಭ್ಯಾಸ ಮಾಡಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಾಪಂ ಇಒ ಸತೀಶ್, ಹಿಂದುಳಿದ ವರ್ಗಗಳ ಇಲಾಖೆ ಸಹಾಯಕ ನಿರ್ದೇಶಕ ನಟರಾಜ್, ಕೆಡಿಪಿ ಸದಸ್ಯರಾದ ಚೇತನ್, ನಂದೀಶ್, ನವೀನ್, ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್, ಶಿಕ್ಷಕ ಟಿ.ಡಿ.ತಮ್ಮಣ್ಣಗೌಡ, ಉಪನ್ಯಾಸಕ ಲಕ್ಷ್ಮೀನಾರಾಯಣ ಸೇರಿದಂತೆ ಇತರರಿದ್ದರು.