

ಹುಕ್ಕೇರಿ: ತಾಲೂಕಿನ ಜನರು ರಾಜಕೀಯ, ಸಾಮಾಜಿಕ ಮತ್ತು ಸಹಕಾರ ಕ್ಷೇತ್ರದಲ್ಲಿ ನಮ್ಮ ಕುಟುಂಬವನ್ನು ಬೆಳೆಸಿದ್ದಾರೆ. ಉಸಿರು ಇರುವವರೆಗೆ ನಾನು ಮತ್ತು ನನ್ನ ಕುಟುಂಬ ಪ್ರಾಮಾಣಿಕವಾಗಿ ಜನಸೇವೆ ಕೈಗೊಳ್ಳುತ್ತೇವೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ‍್ಸ ಆವರಣದಲ್ಲಿ ಶುಕ್ರವಾರ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆ ಮತದಾನ ಪ್ರತಿನಿಧಿಗಳೊಂದಿಗೆ ಫೋಟೋಶೂಟ್‌ದಲ್ಲಿ ಪಾಲ್ಗೊಂಡು ಮಾತನಾಡಿದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ೬೦ಕ್ಕೂ ಹೆಚ್ಚು ಮತ ಪಡೆದು ಗೆಲುವು ಸಾಽಸುತ್ತೇನೆ. ಬಿಡಿಸಿಸಿ ಬ್ಯಾಂಕ್‌ಗೆ ೪೦ ವರ್ಷಕ್ಕೂ ಹೆಚ್ಚು ಅವಧಿ ನಿರ್ದೇಶಕನಾಗಿ, ೨೭ ವರ್ಷ ಅಧ್ಯಕ್ಷನಾಗಿದ್ದು ದಾಖಲೆಯಾಗಿದೆ. ೧೯೯೬ರಲ್ಲಿ ಡಿಸಿಸಿ ಬ್ಯಾಂಕ್ ಅದರ ನೌಕರರಿಗೆ ವೇತನ ನೀಡಲಾಗದ ಪರಿಸ್ಥಿತಿಯಲ್ಲಿದ್ದಾಗ ಜಿಲ್ಲೆಯ ಎಲ್ಲ ಸಹಕಾರ ಮುಖಂಡರ ಆದೇಶದಂತೆ ಅಧ್ಯಕ್ಷನಾಗಿ ಆಡಳಿತ ಪ್ರಾರಂಭಿಸಿದ್ದೆ ಎಂದರು.
ಇದೀಗ ೭ ಸಾವಿರ ಕೋಟಿ ರೂ.ಗೂ ಹೆಚ್ಚು ದುಡಿಯುವ ಬಂಡವಾಳ ಹೊಂದಿದೆ. ೪ ಬಾರಿ ರಾಜ್ಯ ಸರ್ಕಾರ ಸಾಲ ಮತ್ತು ಬಡ್ಡಿ ಮನ್ನಾ ಮಾಡಿದೆ. ಇದರಿಂದ ರೈತರಿಗೆ ೩ ಸಾವಿರ ಕೋಟಿ ರೂ.ಗೂ ಹೆಚ್ಚು ಲಾಭ ದೊರಕಿದೆ. ಬ್ಯಾಂಕ್ ಠೇವಣಿದಾರರ, ರೈತರ ಹಿತದೃಷ್ಟಿಯಿಂದ ಕೆಲವೊಂದು ಕಠಿಣ ನಿರ್ಧಾರ ತೆಗೆದುಕೊಂಡಿರುವುದೇ ಇಂದಿನ ಚುನಾವಣೆಗೆ ಕಾರಣ. ಬ್ಯಾಂಕ್ ಸದಸ್ಯರು ಯೋಚಿಸಿ ಮತದಾನ ಮಾಡುವಂತೆ ಮನವಿಸಿಕೊಂಡರು.
ಗಜಾನನ ಕ್ವಳ್ಳಿ, ಸತ್ತೆಪ್ಪ ನಾಯಿಕ, ಕೆಂಪಣ್ಣ ದೇಸಾಯಿ, ಮಹಾನಿಂಗ ಸನದಿ, ಪವನ ಕತ್ತಿ, ಪ್ರಶಾಂತ ಪಾಟೀಲ, ಶಶಿಕಾಂತ ದೊಡ್ಡಲಿಂಗನವರ, ರಾಜು ಕೋರೆ, ಬಸಲಿಂಗ ಕರಗುಪ್ಪಿ, ಲಿಂಗರಾಜ ನಾಯಿಕ, ಸಂತೋಷ ಪಾಟೀಲ, ರಾಹುಲ ಪಾಟೀಲ, ಸತಿಗೌಡ ಪಾಟೀಲ, ಅಶೋಕ ಹಿರೇಕೋಡಿ, ಬಸವಂತ ರಡ್ಡಿ, ಬಾಹುಬಲಿ ನಾಗನೂರಿ, ಪ್ರಜ್ವಲ ನಿಲಜಗಿ, ಎಚ್.ಎಲ್.ಪಾಟೀಲ, ಅಣ್ಣಪ್ಪ ಮಾಳಗಿ ಸೇರಿ ೫೨ಕ್ಕೂ ಹೆಚ್ಚು ಮತದಾನ ಪ್ರತಿನಿಧಿಗಳಿದ್ದರು.