

ಮುದ್ದೇಬಿಹಾಳ: ಮಾಧ್ಯಮ ರಂಗವೂ ಇಂದು ಉದ್ಯಮವಾಗಿ ರೂಪುಗೊಂಡಿದೆ. ಸಾಮಾಜಿಕ ಸುಧಾರಣೆಯತ್ತ ಮಾಧ್ಯಮಗಳು ಗಮನ ಹರಿಸಿ ಸಮಾಜದ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಲಿ ಎಂದು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ನೇತೃತ್ವದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದೊಂದಿಗೆ ಮಂಗಳವಾರ ಪಟ್ಟಣದ ರಾಘವೇಂದ್ರ ಮಂಗಲಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ಅಂಗವಿಕಲರಿಗೆ ಸೌಲಭ್ಯಗಳ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪತ್ರಕರ್ತರಿಗಾಗಿ ಶೇ. 1ರಷ್ಟು ಮನೆಗಳನ್ನು ಮೀಸಲಿಡುವ ಕಾರ್ಯವನ್ನು ನನ್ನ ಅವಧಿಯಲ್ಲಿ ಮಾಡುತ್ತೇನೆ. ಐದು ವರ್ಷದಲ್ಲಿ ಎಷ್ಟು ಮನೆಗಳು ಬರುತ್ತವೆಯೋ ಅಷ್ಟರಲ್ಲಿ ಪತ್ರಕರ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಕುಂಟೋಜಿ ಸಂಸ್ಥಾನ ಹಿರೇಮಠದ ಚೆನ್ನವೀರ ದೇವರು ಮಾತನಾಡಿ, ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಿಂದ ಅಂಗವಿಕಲರಿಗೆ ಸೌಲಭ್ಯಗಳನ್ನು ಒದಗಿಸಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಅಸ್ಕಿ ಫೌಂಡೇಷನ್ ಅಧ್ಯಕ್ಷ ಸಿ.ಬಿ. ಅಸ್ಕಿ, ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ್ ನಡಹಳ್ಳಿ ಮಾತನಾಡಿ, ಸಮಸ್ಯೆಗಳನ್ನು ಎತ್ತಿ ತೋರಿಸುವ ಕಾರ್ಯವನ್ನು ಮಾಧ್ಯಮರಂಗದಲ್ಲಿ ಕೆಲಸ ಮಾಡುವವರು ಮಾಡಬೇಕು ಎಂದರು.
ವಿದ್ಯಾಸ್ಪೂರ್ತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಸಮ್ಮ ಸಿದರೆಡ್ಡಿ ಮಾತನಾಡಿ, ವಿದ್ಯಾಸ್ಪೂರ್ತಿ ಶಿಕ್ಷಣ ಸಂಸ್ಥೆಯಿಂದ ಅಂಗವಿಕಲರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಕಾರ್ಯ ಮಾಡುತ್ತೇವೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ನಾಗೇಶ ಎನ್.ಪಿ., ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿದರು. ಸಂಘಟನೆ ತಾಲೂಕಾ ಉಪಾಧ್ಯಕ್ಷೆ ಅನೀಲ್ ತೇಲಂಗಿ ಪ್ರಾಸ್ತಾವಿಕ ಮಾತನಾಡಿದರು. ಸಾಧನಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಿರಿಜಾ ಕಡಿ, ಕಾನಿಪ ಧ್ವನಿ ಸಂಘಟನೆ ಜಿಲ್ಲಾಧ್ಯಕ್ಷ ಯೂಸೂಫ್ ನೇವಾರ, ಪ್ರಧಾನ ಕಾರ್ಯದರ್ಶಿ ವಿನಾಯಕ ಸೊಂಡೂರ, ಸಂಘಟನೆ ತಾಲೂಕಾಧ್ಯಕ್ಷ ಶಂಕರ ಹೆಬ್ಬಾಳ, ಪ್ರಧಾನ ಕಾರ್ಯದರ್ಶಿ ಗುಲಾಮೊಹ್ಮದ ದಫೇದಾರ, ಜಿ.ಟಿ. ಘೋರ್ಪಡೆ, ಅಯೂಬ್ ಮನಿಯಾರ, ರವಿ ತೇಲಂಗಿ, ಎಸ್.ಜೆ. ಸಂಗಾಲೀಕ, ಹಣಮಂತ ನಲವಡೆ, ವಿನಯಕುಮಾರ ಕಡ್ಲಿಮಟ್ಟಿ, ಈರಯ್ಯ ಹಿರೇಮಠ, ಬಸವರಾಜ ಕುಂಟೋಜಿ, ವಾಜೀದ ಚೌಧರಿ ಇತರರಿದ್ದರು. ದೀಪಾರತ್ನಶ್ರೀ, ವಿನಾಯಕ ಭಟ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಂಗಮೇಶ ಶಿವಣಗಿ ನಾಡಗೀತೆ ಹಾಡಿದರು. ಶ್ರೀಶೈಲ ಹೂಗಾರ ಸ್ವಾಗತಿಸಿದರು. ಟಿ.ಡಿ. ಲಮಾಣಿ ನಿರೂಪಿಸಿದರು. ಎಸ್.ಕೆ. ಘಾಟಿ ವಂದಿಸಿದರು.