ಮತದಾರರ ಪಟ್ಟಿಯಲ್ಲಿನ ಲೋಪದೋಷ ಸರಿಪಡಿಸಲಿ!

13_weeb
Published on

ಶ್ರೀನಿವಾಸಪುರ: ಅ.28ರಂದು ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಗಳಿಗೆ ನಿಗದಿಯಾಗಿರುವ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಬಹಳಷ್ಟು ಲೋಪ ದೋಷಗಳಾಗಿವೆ ಎಂದು ತಾಲೂಕು ದಂಡಾಧಿಕಾರಿಗಳ ಕಚೇರಿಯ ಮುಂದೆ ಇತ್ತೀಚೆಗೆ ಶಿಕ್ಷಕರು ಪ್ರತಿಭಟಿಸಿದರು.


ಪ್ರಸ್ತುತ ಇರುವಂತಹ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು, ಕರ್ನಾಟಕ ಸರ್ಕಾರಿ ನೌಕರರ ಸಂಘ ಬೈಲಾ ನಿಯಮದಂತೆ ಮತದಾರರ ಪಟ್ಟಿಯನ್ನು 22 ದಿನಗಳ ಮುಂಚಿತವಾಗಿ ಪ್ರಕಟಣೆ ಮಾಡಬೇಕು. ಆದರೆ ಪ್ರಕಟಿಸಿಲ್ಲ ಎಂದು ಶಿಕ್ಷಕ ಕಲಾ ಶಂಕರ್​ ದೂರಿದರು. ಎಂ.ಬೈರೇಗೌಡರು ಪ್ರಸ್ತುತ ನೌಕರರ ಸಂಘದ ನಿರ್ದೇಶಕರಾಗಿದ್ದು, ಪ್ರೌಢಶಾಲಾ ವಿಭಾಗದಲ್ಲಿಎರಡು ಬಾರಿ ಸ್ಪರ್ಧಿಸಿ ವಿಜೇತರಾಗಿದ್ದರು. ಆದರೆ, ಈಗ ಅವರ ಹೆಸರನ್ನು ಪ್ರಾಥಮಿಕ ಶಾಲಾ ವಿಭಾಗದ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುರಳಿಬಾಬು ಮಾತನಾಡಿ, 2024ಜೂನ್​ನಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಾಲ್ಕು ಶಿಕ್ಷಕರು ನಿವೃತ್ತಿಯಾಗಿದ್ದು, ಇಬ್ಬರ ಹೆಸರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿಸಿದ್ದು, ಇಬ್ಬರ ಹೆಸರನ್ನು ತೆಗೆದಿದ್ದೇಕೆ. ತರಾತುರಿಯಲ್ಲಿ ಕಾರ್ಯಕಾರಿಣಿ ಸಮಿತಿ ಸಭೆ ಕರೆಯದೆ ಮತದಾರರ ಪಟ್ಟಿ ತಯಾರಿಕೆ ಮಾಡಲು ಕಾರಣವೇನು..? ಪ್ರಸ್ತುತ ಚುನಾವಣಾ ದಿನಾಂಕದೊಳಗೆ ಅಧ್ಯಕ್ಷರು ಮತದಾರರ ಪಟ್ಟಿಯಲ್ಲಿ ಆಗಿರುವ ಲೋಪದೋಷ ಸರಿಪಡಿಸದೆ ಹೋದರೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಸರ್ಕಾರಿ ನೌಕರರ ಸಂಘದ ಚುನಾವಣೆಗೆ ನೇಮಿಸಿರುವ ಚುನಾವಣಾ ಅಧಿಕಾರಿಗಳಿಗೆ ತಹಸೀಲ್ದಾರ್​ ಜಿ.ಎನ್​.ಸುಧೀಂದ್ರ ಮೂಲಕ ಮನವಿ ಸಲ್ಲಿಸಿದರು. ತಹಸೀಲ್ದಾರ್​ ಜಿ.ಎನ್​.ಸುಧೀಂದ್ರ ಮಾತನಾಡಿ, ತಾಲೂಕು ನೌಕರರ ಸಂಘದ ಅಧ್ಯಕ್ಷರ ಮೇಲೆ ಕ್ರಮಕೈಗೊಳ್ಳಲು ನನಗೆ ಅಧಿಕಾರ ಇಲ್ಲ. ಇಲ್ಲಿ ನೌಕರರ ಸಂಘಕ್ಕೆ ಸಂಬಂಧಿಸಿದಂತೆ ತಾಲೂಕುಮಟ್ಟದಲ್ಲಿ ಆಡಳಿತ ಅಧಿಕಾರಿಯೂ ಇಲ್ಲ. ಸರ್ಕಾರವು ನೌಕರರ ಸಂಘಕ್ಕೆ ಸಂಬಂಧಿಸಿದಂತೆ ಸಿ.ಎನ್​.ಮಂಜುನಾಥ್​ ಅವರು ರಾಜ್ಯಮಟ್ಟದ ಆಡಳಿತ ಅಧಿಕಾರಿಯಾಗಿ ಸರ್ಕಾರ ನೇಮಿಸಿದೆ ಅವರಿಗೆ ನೇರವಾಗಿ ದೂರು
ಸಲ್ಲಿಸುವಂತೆ ಸಲಹೆ ನೀಡಿದರು. ತಮ್ಮ ಮನವಿಯನ್ನು ಆಡಳಿತ ಅಧಿಕಾರಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net