

ಗೋಣಿಕೊಪ್ಪ: ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ಪ್ರತಿವರ್ಷ ದಸರಾ ಜನೋತ್ಸವದ ಅಂಗವಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಆ ಮೂಲಕ ಸ್ಥಳೀಯರಿಗೆ ಅವಕಾಶ ನೀಡುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೈಕೇರಿ ಭಗವತಿ ಯುವ ದಸರಾ ಸಮಿತಿ ಅಧ್ಯಕ್ಷ ಜಮ್ಮಡ ಅರಸು ಅಪ್ಪಣ್ಣ ಕ್ರೀಡಾಪಟುಗಳಿಗೆ ಸಲಹೆ ನೀಡಿದರು.ಗೋಣಿಕೊಪ್ಪ ಸಮೀಪದ ಕೈಕೇರಿ ಹಿರಿಯ ಪ್ರಾಥಮಿಕ ಶಾಲೆ
ಆವರಣದಲ್ಲಿ ಸೋಮವಾರ 19ನೇ ವರ್ಷದ ಕೈಕೇರಿ ಭಗವತಿ ಯುವ ದಸರಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿವರ್ಷದಂತೆ ಈ ವರ್ಷವೂ ದಸರಾ ಆಚರಣೆ ಅಂಗವಾಗಿ ಕ್ರೀಡಾಕೂಟ ಆಯೋಜಿಸಲಾಗಿದೆ. ಪುರುಷ, ಮಹಿಳೆ ಹಾಗೂ ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಗ್ರಾಮದ ಜನತೆಯಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಪ್ರತಿ ವರ್ಷವೂ ಕ್ರೀಡಾಕೂಟವನ್ನು ಉತ್ತಮವಾಗಿ ಆಯೋಜಿಸಲಾಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗ್ರಾಮದ ಹಿರಿಯರಾದ ಜಮ್ಮಡ ಮೋಹನ್, ಸಮಿತಿ ಉಪಾಧ್ಯಕ್ಷರಾದ ಪಡಿಕಲ್ ಯದು ಇತರರು ಮಾತನಾಡಿದರು.
ಕ್ರೀಡಾಕೂಟದ ಅಂಗವಾಗಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಹಗ್ಗಜಗ್ಗಾಟ, ಬಾರದ ಗುಂಡು ಎಸೆತ, ಮ್ಯೂಸಿಕಲ್ ಚೇರ್, ಆಟೋಟ ಸ್ಪರ್ಧೆ ಹಾಗೂ ಪಾಸಿಂಗ್ ದಿ ಬಾಲ್, ಮಕ್ಕಳಿಗಾಗಿ ಆಯೋಜಿಸಲಾಗಿತ್ತು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ನಗದು ಬಹುಮಾನದೊಂದಿಗೆ ಪಾರಿತೋಷಕ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೈಕೇರಿ ಭಗವತಿ ಯುವ ದಸರಾ ಸಮಿತಿ ಗೌರವ ಅಧ್ಯಕ್ಷರಾದ ಕುಪ್ಪಂಡ ಗಿರಿ ಪೂವಣ್ಣ, ಪದಾಧಿಕಾರಿಗಳಾದ ಕೊಕ್ಕಂಡ ಧರ್ಮಜ ಉತ್ತಪ್ಪ, ಎಸ್.ಸುಂದರ, ಎಂ.ಎಸ್.ಪ್ರವೀಣ್, ಎಂ.ಎಸ್.ಪ್ರಸಾದ್, ಎಂ.ಇ.ಧಮೇರ್ಂದ್ರ, ಎ.ಪಿ.ಸುರೇಶ್, ಜಮ್ಮಡ ಹೇಮ ನಾಣಯ್ಯ, ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಎ.ಮುತ್ತುರಾಜ್, ಖಜಾಂಚಿ ಚಿಯಕ್‌ಪೂವಂಡ ಸುಬ್ರಮಣಿ ಇತರರು ಇದ್ದರು.