ಸಾಹಿತ್ಯ ಸಮಾಜವನ್ನು ಎಚ್ಚರಿಸಲಿ: ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಸಲಹೆ

mmm (4)
Published on

ಮೈಸೂರು: ಲೇಖಕ ಡಿ.ಎನ್.ಕೃಷ್ಣಮೂರ್ತಿ (ಡಿಎನ್ಕೆ) ಅವರ ಮೂರು ಕೃತಿಗಳನ್ನು ನಗರದಲ್ಲಿ ಬಿಡುಗಡೆಗೊಳಿಸಲಾಯಿತು.
ಡಿಎನ್ಕೆ ಸ್ನೇಹ ಬಳಗದಿಂದ ನಂಜುಮಳಿಗೆ ವೃತ್ತದ ಬಳಿ ಇರುವ ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾನದಿ, ಪರಿಕ್ರಮಣ ಹಾಗೂ ನ್ಯಾಯದರ್ಶನ ಕೃತಿಗಳು ಅನಾವರಣಗೊಂಡವು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಅವರು, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಮಾಜಮುಖಿ ಕೃತಿಗಳು ಹೆಚ್ಚಾಗಿ ಬರಬೇಕು. ಸಾಹಿತ್ಯ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಮಹಾನದಿ ಕಾದಂಬರಿ ಸಾಮಾಜಿಕ, ಸಮಾಜಮುಖಿ ಕೃತಿಯಲ್ಲದೆ ಮಹಿಳಾವಾದದ ಕೃತಿಯೂ ಆಗಿದೆ. ನೈತಿಕ ನಿಲುವನ್ನು ಕೃತಿ ಒಳಗೊಂಡಿದೆ. ಡಿ.ಎನ್.ಕೃಷ್ಣಮೂರ್ತಿ ಅವರು ಗ್ರಾಮೀಣ ಬದುಕಿನ ಅನುಭವವನ್ನು ಮಹಾನದಿಯಲ್ಲಿ ಚಿತ್ರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪರಿಕ್ರಮಣ ಕಾದಂಬರಿ ಬಿಡುಗಡೆ ಮಾಡಿದ ಶ್ರೀನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೃತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೆಚ್ಚಿನ ಕೃತಿಗಳು ಬಿಡುಗಡೆಯಾಗುತ್ತಿರುವುದರಿಂದ ಒಳ್ಳೆಯ ಕೃತಿಗಳ ಮೌಲ್ಯಕ್ಕೆ ತೊಡಕು ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಡಿಎನ್ಕೆ ಅವರಿಗೆ 60ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ಅವರು ಅಭಿನಂದಿಸಿದರು. ಡಿಎನ್ಕೆ ಅವರ ನ್ಯಾಯದರ್ಶನ ಕಾದಂಬರಿಯನ್ನು ಲೇಖಕ ಬನ್ನೂರು ಕೆ.ರಾಜು ಬಿಡುಗಡೆಗೊಳಿಸಿದರು.
ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಮಹಾರಾಜ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎಸ್.ಮುರಳಿ, ಲೇಖಕ ಡಿ.ಎನ್.ಕೃಷ್ಣಮೂರ್ತಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ನಂ. ಶ್ರೀಕಂಠಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯ ಶಂಕರನಾರಾಯಣ, ಉಪನ್ಯಾಸಕ ರಾಜೇಂದ್ರ ಪ್ರಸಾದ್, ಬಿಜೆಪಿ ಮುಖಂಡ ಎಸ್.ಆರ್.ಗೋಪಾಲರಾವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net