

ವಿಜಯಪುರ: ಸಾಹಿತ್ಯ ಎನ್ನುವುದು ಉತ್ತಮ ವಿಚಾರಗಳಿಂದ ಕೂಡಿದ ಸತ್ವಯುತ ಹಾಗೂ ಸರ್ವಹಿತ ಕಾಯುವ ಸಂಪತ್ತು ಅದು ಇನ್ನಷ್ಟು ಗಟ್ಟಿಗೊಳ್ಳಬೇಕಾದರೆ ಓದುಗರು ಮತ್ತಷ್ಟು ಮತ್ತಷ್ಟು ಸಂಪನ್ಮೂಲವನ್ನು ಹುಡುಕಬೇಕು, ಸಂಶೋಧಿಸಬೇಕು, ಗ್ರಹಿಸಬೇಕು, ಚಿಂತಿಸಬೇಕು ಎಂದು ಉಕ್ಕಲಿಯ ನ್ಯೂ ಇಂಗ್ಲಿಷ್ ಮಾಧ್ಯಮಿಕ ಶಾಲೆಯ ಶಿಕ್ಷಕ ಆರ್.ಎಸ್. ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ಇಲ್ಲಿನ ರಾಜಾಜಿ ನಗರದಲ್ಲಿರುವ ಉಪನ್ಯಾಸಕ ಸುಭಾಸಚಂದ್ರ ಕನ್ನೂರರ ನಿವಾಸದಲ್ಲಿ ಓದುಗರ ಚಾವಡಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡ 20ನೇ ಮಾಸಿಕ ಕೃತಿ ಚಿಂತನೆಯಲ್ಲಿ ಇಂಡಿಯ ಅನಿಲ ಗುನ್ನಾಪುರ ವಿರಚಿತ ‘ಗುಬ್ಬಚ್ಚಿ ಗೂಡಿನಲ್ಲಿ’ ಕವನ ಸಂಕಲನವನ್ನು ಪರಿಚಯಿಸಿ ಮಾತನಾಡಿದರು.
ಸಾಹಿತ್ಯವೂ ಮನೆ-ಮನಗಳಿಗೆ ಮುಟ್ಟಿಸುವಂತಾಗಬೇಕು. ಓದುಗನ ಸಂಪನ್ಮೂಲವು ನಿಂತ ನೀರಾಗದೆ ಹರಿಯುವ ನದಿಯಂತಾಗಲಿ, ಹಳ್ಳವಾಗದೆ ಹೊಳೆಯಾಗಲಿ, ಜಾತಿಯತೆ-ಅಸಮಾನತೆಗಳು, ಮೌಢ್ಯತೆಗಳು ತೊಲಗುವುದರ ಜೊತೆಗೆ ಸಮಾಜದ ಓರೆಕೋರೆಗಳನ್ನು ತಿದ್ದಿ ಸಮಾಜವನ್ನು ಶುದ್ಧಗೊಳಿಸುವಂತಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಕ್ಯಾಬ್ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನ ಮೇತ್ರಿ, ಸಂಘಟನೆಗಳು ಹುಟ್ಟಿಕೊಳ್ಳುವುದು ಪ್ರಚಾರಕ್ಕೆ ಅಥವಾ ಸ್ವಾರ್ಥಕ್ಕೆ ಆಗಬಾರದು. ಸಂಘಟನೆಗಳಲ್ಲಿ ಅದರಲ್ಲೂ ವಿಶೇಷವಾಗಿ ಸಾಹಿತ್ಯಪರ ಸಂಸ್ಥೆಗಳಲ್ಲಿ ಸಾಹಿತ್ಯದ ಕುರಿತು ಚಿಂತನ-ಮಂಥನಗಳಾಗಬೇಕು. ಇಲ್ಲಿ ಉದ್ಭವಿಸುವ ರಸವನ್ನು ಸಮಾಜಕ್ಕೆ ಉಣಬಡಿಸಬೇಕು ಎಂದರು.
ನಮ್ಮ ಸುತ್ತಲು ಒಂದು ಶುದ್ಧ ಮತ್ತು ಸಮಾಜಮುಖಿ ಸಾಹಿತ್ಯಿಕ ಜೀವಂತಿಕೆಯನ್ನು ಇಟ್ಟುಕೊಳ್ಳುವಲ್ಲಿ ಪ್ರಾಮಾಣಿಕವಾಗಿ ಸಾಂಕ ಪ್ರಯತ್ನ ಇರಬೇಕು. ಅಂದಾಗ ಮಾತ್ರ ಪ್ರತಿ ಸಂಘಟನೆ, ಪರಿಷತ್ತು ಮತ್ತಿತರ ವೇದಿಕೆಗಳಿಗೆ ಒಂದು ಮಹತ್ವ ದೊರಕುತ್ತದೆ. ಈ ದಿಸೆಯಲ್ಲಿ ವಿಜಯಪುರದ ಓದುಗರ ಚಾವಡಿ ಅತ್ಯಂತ ಮಹತ್ವದ ಹಾಗೂ ಅರ್ಥಪೂರ್ಣವಾದ ವೇದಿಕೆಯಾಗಿದ್ದು ಹುಟ್ಟಿದ ಎರಡೇ ವರ್ಷಗಳಲ್ಲಿ ಮನೆ-ಮನೆಯ ಮಾತಾಗಿರುವುದು ಶ್ಲಾಘನೀಯ. ಮನೆಗಳಲ್ಲಿ ಸಾಹಿತ್ಯಿಕ ವಾತಾವರಣ ನಿರ್ಮಿಸುವುದರ ಜೊತೆಗೆ ಸಾರ್ವಜನಿಕವಾಗಿಯೂ ಸಾಹಿತ್ಯಿಕ ಸಮಾರಂಭಗಳನ್ನು ಏರ್ಪಡಿಸುತ್ತಿರುವುದು ನಿಜಕ್ಕೂ ಸ್ತುತ್ಯಾರ್ಹವಾದುದು ಎಂದು ನುಡಿದರು.
ವಿಶ್ರಾಂತ ಮುಖ್ಯೋಪಾಧ್ಯಾಯ ವಿ.ವೈ.ಕರಿಗಾರ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮಹಾದೇವ ಕುರೆ, ರಂಗಕರ್ಮಿ ಸಂಗಮೇಶ ಬದಾಮಿ, ವಿಶ್ರಾಂತ ಮುಖ್ಯೋಪಾಧ್ಯಾಯಿನಿ ಶಾಂತಾಬಾಯಿ ಎಸ್. ಕನ್ನೂರ, ಶಿಕ್ಷಕಿ ಶ್ರೀದೇವಿ ಎಸ್. ಕನ್ನೂರ, ಯು.ಎನ್. ಕುಂಟೋಜಿ, ಡಾ. ರಾಜಕುಮಾರ ಜೊಳ್ಳಿ, ಬಸವರಾಜ ಕುಂಬಾರ, ದಾಕ್ಷಾಯಣಿ ಬಿರಾದಾರ, ಸುನೀತಾ ಉಮರಾಣಿ, ರಾಜಶೇಖರ ಉಮರಾಣಿ, ಬಸವರಾಜ ಬೀಳಗಿ, ಮುಸ್ತಾಕ ಮಲಘಾಣ, ಮಂಜುನಾಥ ಜುನಗೊಂಡ, ಶರಣಗೌಡ ಪಾಟೀಲ, ರಾಜೇಂದ್ರಕುಮಾರ ಬಿರಾದಾರ, ಸುಭಾಸಚಂದ್ರ ಕನ್ನೂರ, ಬಿ.ಆರ್. ಬನಸೋಡೆ, ಶರಣು ಸಬರದ ಮತ್ತಿತರರಿದ್ದರು.