

ಹುಣಸೂರು: ಬುದ್ಧ ನೀಡಿದ ವೈಚಾರಿಕತೆಯ ಬೆಳಕು ಎಲ್ಲರ ಮನವನ್ನು ತಲುಪಬೇಕಿದೆ ಎಂದು ಹಿರಿಯ ದಲಿತ ಮುಖಂಡ ಹರಿಹರ ಅನಂದಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಕೋರ್ಟ್ ಸರ್ಕಲ್ ಬಳಿಯಿರುವ ನಾಗಣ್ಣ ದೇವಾಡಿಗರ ಟೀ ಅಂಗಡಿ ಮುಂಭಾಗ ಬುಧವಾರ ಭಾರತೀಯ ಬುದ್ಧ ಸಮುದಾಯ ಮತ್ತು ಹುಣಸೂರು ಕೃಷ್ಣಮೂರ್ತಿ ವಾದ್ಯಗೋಷ್ಠಿ ಕಲಾವಿದರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ದೀಕ್ಷೆ ಪ್ರಜ್ಞಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಬಾಬಾ ಸಾಹೇಬರು 1956ರ ಅ.14ರಂದು ಹಿಂದು ಧರ್ಮ ಬಿಟ್ಟು ಲಕ್ಷಾಂತರ ಅನುಯಾಯಿಗಳೊಂದಿಗೆ ನಾಗಪುರದಲ್ಲಿ ಬೌದ್ಧ ಧರ್ಮ ದೀಕ್ಷೆ ಸ್ವೀಕರಿಸಿದರು. ಹಾಗಾಗಿ ಬುದ್ಧನ ಸಮಾನತೆ, ಮಾನವೀಯತೆ ಹಾಗೂ ವೈಚಾರಿಕತೆಯ ಬೆಳಕು ಪ್ರತಿ ಮನೆ ತಲುಪಬೇಕು. ಎಂದರು.
ವಕೀಲ ಯೋಗಣ್ಣಗೌಡ ಮಾತನಾಡಿ, ಭಗವಾನ್ ಬುದ್ಧನ ಸಂದೇಶವನ್ನು ಮನೆಯಿಂದ ಮನೆಗೆ ಪಸರಿಸುವ ಕೆಲಸವಾಗಬೇಕು ಎಂದರು.
ಡೀಡ್ ಸಂಸ್ಥೆ ಶ್ರೀಕಾಂತ್, ಮುಖಂಡ ಬಸವಲಿಂಗಯ್ಯ, ರಾಜು ನಾಯ್ಕರ್, ವಕೀಲ ಸುಂದರೇಶ್, ಚಂದ್ರೇಗೌಡ ಮಾತನಾಡಿದರು. ಗಾಯಕ ಸಿಂಗೇಶ್ ಬುದ್ಧನ ಕುರಿತು ಹಾಡಿದರು. ಬುದ್ಧ ಸಮುದಾಯದ ಅಧ್ಯಕ್ಷ ಹನುಮಯ್ಯ ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದರು. ರಾಜು ಬಾಚಳ್ಳಿ, ಸಿದ್ದೇಶ್, ಭೀಮನಹಳ್ಳಿ ಮಹೇಶ್, ಕಿರಿಜಾಜಿ ಗಜೇಂದ್ರ, ಹಳ್ಳದಕೊಪ್ಪಲ್ ದರ್ಶನ್ ಇತರರು ಹಾಜರಿದ್ದರು.