

ರಾಮದುರ್ಗ: ರಾಮದುರ್ಗ ನ್ಯಾಯಾಲಯದಲ್ಲಿ ಸುಮಾರು 3,000 ಪ್ರಕರಣಗಳು ಬಾಕಿ ಇವೆ. ಸ್ಥಳೀಯ ವಕೀಲರು ನ್ಯಾಯಾಧೀಶರಿಗೆ ಸಹಕಾರ ನೀಡಿ ಇತ್ಯರ್ಥಕ್ಕೆ ಮುಂದಾದಲ್ಲಿ ಮಾತ್ರ ತಮ್ಮ ಪಕ್ಷಗಾರರಿಗೆ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ ಎಂದು ಉಚ್ಚ ನ್ಯಾಯಾಲಯ ಹಾಗೂ ಬೆಳಗಾವಿ ಆಡಳಿತಾತ್ಮಕ ವಿಭಾಗದ ನ್ಯಾಯಾಧೀಶೆ ಕೆ.ಎಸ್.ಮುದಗಲ್ ಕರೆ ನೀಡಿದರು.
ಪಟ್ಟಣದ ಸವದತ್ತಿ ರಸ್ತೆಯಲ್ಲಿ ನಿರ್ಮಿಸಿದ ನ್ಯಾಯಾಲಯ ಸಂರ್ಕೀಣದ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ವಕೀಲರಿಗೆ ವೃತ್ತಿಯ ಜತೆಗೆ ಹೃದಯ ಶ್ರೀಮಂತಿಕೆ ಇದ್ದಲ್ಲಿ ಪಕ್ಷಗಾರರ ಮನ ಗೆದ್ದು ಅತ್ಯುತ್ತಮ ವಕೀಲರಾಗಲು ಸಾಧ್ಯವಾಗುತ್ತದೆ. ನ್ಯಾಯಾಧೀಶರು ಹಾಗೂ ಹಿರಿಯ ವಕೀಲರ ತರಬೇತಿ ಪಡೆದಲ್ಲಿ ಸಾಧನೆ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಸಚಿನ್ ಮಗದುಮ್ ಮಾತನಾಡಿ, ಹಿಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾಗಿದೆ. ವಕೀಲರ ಸಂಖ್ಯೆ ಹೆಚ್ಚಿಸಲು ಪಾಲಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ವಕೀಲಿ ವೃತ್ತಿ ಮಾಡಲು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗೆ ಕಳುಹಿಸಬೇಕು ಎಂದು ತಿಳಿಸಿದರು. ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ನಾನು ಸಿಎಂ ಆಗಿದ್ದ ಸಮಯದಲ್ಲಿ ಲೋಕೋಪಯೋಗಿ ಇಲಾಖೆ ಜಾಗವನ್ನು ನ್ಯಾಯಾಂಗ ಇಲಾಖೆಗೆ ಹಸ್ತಾಂತರಿಸಿ ರಾಮದುರ್ಗ ನ್ಯಾಯಾಲಯ ಪ್ರಾರಂಭಕ್ಕೆ ಪ್ರಯತ್ನಿಸಿದ್ದೇನೆ.
ಯಾವುದೇ ಸರ್ಕಾರ ಇರಲಿ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಬೇಕು. ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕ ನ್ಯಾಯಾಂಗ ವ್ಯವಸ್ಥೆ ಸೌಲಭ್ಯಗಳ ಜೊತೆಗೆ ವಿಸ್ವಾರ್ಹವಾಗಿದೆ. ರಾಮದುರ್ಗದ ಶಬರಿಕೊಳ್ಳ ಅಭಿವೃದ್ಧಿ ಹಾಗೂ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ರಾಮಚಂದ್ರ ಹುದ್ದಾರ, ವಿಜಯಕುಮಾರ ಪಾಟೀಲ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಆರ್.ಸಿ.ಹಲ್ಯಾಳ, ಪಿಡಬ್ಲು ್ಯಡಿ ಎಇಇ ರವಿಕುಮಾರ ನಂದಿಹಳ್ಳಿ ಇತರರಿದ್ದರು. ರಷ್ಮಿ ಕುಲಕರ್ಣಿ, ಗಿರೀಶ ಹೂಗಾರ ನಿರೂಪಿಸಿದರು. ವಿ.ಬಿ.ಸಿದ್ದಾಟಗಿಮಠ ವಂದಿಸಿದರು.