

ರಾಯಬಾಗ: ಕಲಬುರಗಿಯ ಸೇಡಂ ತಾಲೂಕಿನ ಮಳಖೇಡ ಗ್ರಾಮ ಪಂಚಾಯಿತಿ ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕಿ ಭಾಗ್ಯವಂತಿ ಅಗ್ಗಿಮಠ ಅವರ ಆತ್ಮಹತ್ಯೆಗೆ ಕಾರಣರಾದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘದ ವತಿಯಿಂದ ಶನಿವಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕ ಶ್ರೀನಾಥ ಶಿರಗೂರ ಮಾತನಾಡಿ, ಮೃತರ ಕುಟುಂಬಕ್ಕೆ ಸರ್ಕಾರದಿಂದ 1 ಕೋಟಿ ರೂ. ಪರಿಹಾರ ಹಾಗೂ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಬೇಕು. ಇಂತಹ ಘಟನೆ ನಡೆಯದಂತೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ತಾಪಂ ಯೋಜನಾಧಿಕಾರಿ ನಿಂಗಪ್ಪ ಬೀರಣಗಡ್ಡಿ ಮಾತನಾಡಿ, ತಾಲೂಕಿನಲ್ಲಿರುವ ಪ್ರತಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ವೇತನ ಮತ್ತು ಪತ್ರಿಕೆಗಳ ಬಾಕಿ ಬಿಲ್ ಪಾವತಿಸಲು ಅಭಿವೃದ್ಧಿ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು.
ತಾಪಂ ಅಧಿಕಾರಿ ಬಿ.ವಿ.ಮಸಲಾಜಿ, ಸಿದ್ದರಾಯ ಬಸಳಿಗುಂದಿ, ವಿಠ್ಠಲ ಮಾದರ, ಪರಪ್ಪ ಭಾನಿ, ಭರತೇಶ ಗಣೇಶವಾಡಿ, ದುಂಡಪ್ಪ ಮ್ಯಾಗಡಿ, ರಾಜು ಖೋತ, ಮಲ್ಲಪ್ಪ ಕುಳಲಿ, ದತ್ತಾತ್ರೇಯ ಪಾಟೀಲ, ಶೋಭಾ ಪತ್ತಾರ, ಸುಧಾಕರ ಪಾಟೀಲ, ಶೇಖರ ಕಾಂಬಳೆ, ಸುವರ್ಣಾ ಬನಸಿ, ರಾಜು ನನದಿ, ಸಂಜು ಬಾಪಕರ, ಚಿದಾನಂದ ಕಡಲಸಕರ, ರಾಹುಲ ಸಂಗೋಟಿ, ಕಾಶವ್ವ ಕರಿಗಾರ, ಗಂಗವ್ವ ಸುಭಾನಿ, ಕಲ್ಲಪ್ಪ ಸಗರೆ, ಕುಮಾರ ಸುತಾರ, ನಿಂಗಪ್ಪ ಧನಗರ, ಸುಭಾಷ ಬೆಳಕೂಡ ಇತರರಿದ್ದರು.