

ಸಿಂಧನೂರು: ಸ್ಥಳೀಯ ನಗರಸಭೆಯಲ್ಲಿ ಎಸ್ಸಿ-ಎಸ್ಟಿ ಕಾಯ್ದೆ ಹಾಗೂ ಕರ್ನಾಟಕ ಮುನ್ಸಿಪಲ್ ಕಾಯ್ದೆ -ನಿಯಮಗಳನ್ನು ಉಲ್ಲಂಘಿಸಿ ಹಂಗಾಮಿ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಈ ಕುರಿತು ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಹನುಮಂತ ಕಲ್‌ಶೆಟ್ಟಿ ತಹಸಿಲ್ ಕಚೇರಿ ಮುಂದೆ ಬುಧವಾರ ಧರಣಿ ನಡೆಸಿದರು.
ಈ ಹಿಂದಿನ ಅಧ್ಯಕ್ಷೆ ಪ್ರಿಯಾಂಕ ನಾಯಕ್ ಅವರು ಸರ್ಕಾರಿ ನೌಕರಿ ಬಂದ ಕಾರಣ ರಾಜೀನಾಮೆ ಕೊಟ್ಟಿದ್ದರಿಂದ ಉಪಾಧ್ಯಕ್ಷರಾಗಿದ್ದ ಮಂಜುಳಾ ಪ್ರಭುರಾಜ ಅವರನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಾರದೇ, ಯಾವುದೇ ಅಧಿಕೃತ ಪತ್ರವಾಗಲಿ, ಸರ್ಕಾರದ ಆದೇಶ ಇರದೆ ಪೌರಾಯುಕ್ತರು ಏಕಾಏಕಿ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.
ಆ ಮೂಲಕ ಎಸ್ಸಿ-ಎಸ್ಟಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಹಂಗಾಮಿ ಅಧ್ಯಕ್ಷರ ಆಯ್ಕೆ ಕುರಿತಂತೆ ಸಮಂಜಸವಾದ ದಾಖಲೆ ಕೇಳಿದ ನನಗೆ ಕಾಲಹರಣ ಮಾಡುವ ಉದ್ದೇಶದಿಂದ ಹಾಗೂ ಹಂಗಾಮಿ ಅಧ್ಯಕ್ಷರಿಗೆ ಅನುಕೂಲ ಕಲ್ಪಿಸಲು, ಸರಿಯಾದ ದಾಖಲೆಗಳನ್ನು ನೀಡದೆ ಸತಾಯಿಸುತ್ತಿದ್ದಾರೆ. ಕೂಡಲೇ ಈ ಬಗ್ಗೆ ಪರಿಶೀಲಿಸಿ, ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಹಾಗೂ ಪೌರಾಡಳಿತ ಸಚಿವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.