ಸಾವಯವವಾಗಿ ಭೂಮಿ ಫಲವತ್ತತೆಗೊಳ್ಳಲಿ

11.hgr1
ಕೃಷ್ಣೇಗೌಡರ ತೋಟದಲ್ಲಿ ಕಡಲೆಕಾಯಿ ಬೆಳೆ ಪರೀಕ್ಷಿಸುತ್ತಿರುವ ಅಧಿಕಾರಿಗಳು ಮತ್ತು ಇತರರು.
Published on

ಹಲಗೂರು: ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡಿಕೊಳ್ಳದೆ, ಭೂಮಿಯನ್ನು ರಾಸಾಯನಿಕಮುಕ್ತಗೊಳಿಸಿ ಅದರಲ್ಲಿ ಸಾವಯವ ಪದ್ಧತಿಯಿಂದ ವ್ಯವಸಾಯ ಮಾಡಿ ಅದರ ಫಲವತ್ತತೆ ಹೆಚ್ಚಿಸಿದರೆ ಅದು ನೀಡುವ ಲಾಭ ನಮ್ಮ ಮುಂದಿನ ತಲೆಮಾರಿಗೂ ಮುಂದುವರಿಯುತ್ತದೆ ಎಂದು ಯತ್ತಂಬಾಡಿ ಗ್ರಾಮದ ಸಾಯುವ ಕೃಷಿ ರೈತ ವೈ.ಎಚ್. ಕೃಷ್ಣೇಗೌಡ ತಿಳಿಸಿದರು.

ಯತ್ತಂಬಾಡಿ ಗ್ರಾಮದ ಅವರ ನಿವಾಸದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಪೂರ್ಣ ಸಾವಯವ ಕೃಷಿಕರ ಸಂಘದ ವತಿಯಿಂದ ವಿಷಮುಕ್ತ ಭೂಮಿ, ನಮ್ಮ ಧ್ಯೇಯ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು. ನನಗೆ ಇರುವ ಜಮೀನಿನಲ್ಲಿ ಸಂಪೂರ್ಣ ಸಾವಯವ ಪದ್ಧತಿ ಅನುಸರಿಸಿ ವ್ಯವಸಾಯ ಮಾಡಿಕೊಂಡು ಬೆಣ್ಣೆ ಹಣ್ಣು, ಬಾಳೆ, ಮೋಸಂಬಿ, ಮಾವು, ಸೀಬೆ, ನಿಂಬೆಹಣ್ಣು ಮುಂತಾದ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಎಳ್ಳು ಮತ್ತು ಕಡಲೆಕಾಯಿಯನ್ನು ನಿರಂತರ ಬೆಳೆಯಾಗಿ ಬೆಳೆಯುತ್ತೇನೆ. ನಮಗೆ ಭೂಮಿಯ ಫಲವತ್ತತೆಯೇ ಮುಖ್ಯ. ಅದು ಸಂಪೂರ್ಣ ಫಲವತ್ತತೆಯಿಂದ ಕೂಡಿದರೆ ಸಿಗುವ ಲಾಭ ನಿರಂತರ. ನಾವು ಆರೋಗ್ಯಕರವಾಗಿ ದೃಢವಾಗಿ ಇರಲು ಸಹಕಾರಿ. ಆದ್ದರಿಂದ ಮುಂದಿನ ಯುವ ಪೀಳಿಗೆಯವರು ಸಾಯುವ ವ್ಯವಸಾಯಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಮಂಡ್ಯ ಜಿಲ್ಲಾ ಜಂಟಿ ನಿರ್ದೇಶಕರಾದ ಅಶೋಕ್, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸೌಮ್ಯಾಶ್ರೀ, ಶಾಲೆಯ ಮಾಜಿ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ, ಸಂಪೂರ್ಣ ಸಾವಯವ ಕೃಷಿಕರ ಸಂಘದ ಮಳವಳ್ಳಿಯ ಅಧ್ಯಕ್ಷ ಎಂ. ಎನ್.ಮಹೇಶ್ ಕುಮಾರ್, ಕಾರ್ಯದರ್ಶಿ ಚಿಕ್ಕಣ್ಣ, ಸಹ ಕಾರ್ಯದರ್ಶಿ ಶಿವಕುಮಾರ್, ಗಜೇಂದ್ರ, ಕಪನೀಗೌಡ, ಮಹಾದೇವಯ್ಯ ದೇವರಾಜು, ರವಿ, ಶಿವಮಾದು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net