

ತಿ.ನರಸೀಪುರ: ಕಾವೇರಿ, ಕಪಿಲಾ ಹಾಗೂ ಸ್ಫಟಿಕ ಸರೋವರ ನದಿಗಳು ಸಂಗಮಗೊಳ್ಳುವ ತಿರುಮಕೂಡಲಿನ ತ್ರಿವೇಣಿ ಸಂಗಮದಲ್ಲಿ ಫೆಬ್ರವರಿಯಲ್ಲಿ ಮೂರು ದಿನಗಳ ಕಾಲ ದಕ್ಷಿಣ ಭಾರತದ ಕುಂಭಮೇಳ ನಡೆಯಲಿದೆ. ಈವರೆಗೆ 11 ಕುಂಭಮೇಳಗಳು ನಡೆದಿವೆಯಾದರೂ ಧಾರ್ಮಿಕ ಉತ್ಸವದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳು ಸೇರಿದಂತೆ ಆಯಾ ಸರ್ಕಾರದ ಜನಪ್ರತಿನಿಧಿಗಳು ಕುಂಭಮೇಳವನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಿದ್ದಾರೆ. ಮೇಳವನ್ನು ನಾಡಹಬ್ಬವನ್ನಾಗಿ ಆಚರಿಸುತ್ತೇವೆ ಎಂಬ ಘೋಷಣೆ ಘೋಷಣೆಯಾಗಿಯೇ ಉಳಿದಿದ್ದು, ಅಧಿಕೃತ ಆದೇಶ ಈವರೆಗೂ ಹೊರಬಿದ್ದಿಲ್ಲ.
ದಕ್ಷಿಣ ಕಾಶಿಗಿಂತಲೂ ಗುಲಗಂಜಿಯಷ್ಟು ಶ್ರೇಷ್ಠವೆಂದು ಕರೆಯಲ್ಪಡುವ ತಿರುಮಕೂಡಲಲ್ಲಿ ಪುರಾಣ ಪ್ರಸಿದ್ಧ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯ, ಶ್ರೀ ಅಗಸ್ತ್ಯೇಶ್ವರ ಸ್ವಾಮಿ, ಶ್ರೀ ಭಿಕ್ಷೇಶ್ವರ, ಶ್ರೀ ಬಳ್ಳೇಶ್ವರ ಹಾಗೂ ಶ್ರೀ ಮೂಲ ಸ್ಥಾನೇಶ್ವರ ದೇವಾಲಯಗಳಿದ್ದು, ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಸರ್ಕಾರದ ಪ್ರಾಯೋಜಕತ್ವ ಹಾಗೂ ಮಠಾಧೀಶರ ನೇತೃತ್ವದಲ್ಲಿ ಕುಂಭಮೇಳ ನಡೆಯುವ ತ್ರಿವೇಣಿ ಸಂಗಮ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಗೊಂಡಿಲ್ಲ. ನದಿಯ ಪಾತ್ರದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.
ಕುಂಭಮೇಳ ತಿರುಮಕೂಡಲು ನರಸೀಪುರದ ಹಿರಿಮೆಯನ್ನು ಹೆಚ್ಚಿಸುವಂತೆ ಆಗಬೇಕು. ಶಾಶ್ವತ ಯೋಜನೆಗಳು ತ್ರಿವೇಣಿ ಸಂಗಮದಲ್ಲಿ ಅನುಷ್ಠಾನಗೊಳ್ಳಬೇಕು. ದೇವಾಲಯಗಳು ಜೀರ್ಣೋದ್ಧಾರವಾಗಬೇಕು. ತ್ರಿವೇಣಿ ಸಂಗಮದಲ್ಲಿ ಸ್ವಚ್ಛತೆ ಕಾಪಾಡಬೇಕು. ಪುಣ್ಯ ಸ್ನಾನ ಮಾಡುವ ಸಂಗಮ ಕ್ಷೇತ್ರ ಪ್ರಮುಖ ಯಾತ್ರಾ ಸ್ಥಳವಾಗಬೇಕು. 12ನೇ ಕುಂಭಮೇಳದ ಕಾತರದಲ್ಲಿರುವ ತಿರುಮಕೂಡಲು ನರಸೀಪುರದ ಜನತೆ ನಾಡ ಹಬ್ಬದ ಬಯಕೆಯನ್ನು ಲೌಡ್ ಸ್ಪೀಕರ್‌ನಲ್ಲಿ ಹಂಚಿಕೊಂಡಿದ್ದಾರೆ.
ಸಿಎಂ ಗಮನ ಸೆಳೆಯಲು ಯತ್ನ
ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡಬೇಕೆಂಬ ಮಹದಾಸೆಯಿಂದ 2013 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಿರುಮಕೂಡಲು ತ್ರಿವೇಣಿ ಸಂಗಮಕ್ಕೆ ಅಭಿವೃದ್ಧಿಯ ಸ್ಪರ್ಶ ನೀಡಲಾಗಿದೆ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿರುವ ಶ್ರೀ ಅಗಸ್ತ್ಯೇಶ್ವರ ದೇವಾಲಯ ಸರ್ಕಾರದ ಅನುದಾನದಲ್ಲಿ ಜೀರ್ಣೋದ್ಧಾರಗೊಂಡಿದೆ. ದಕ್ಷಿಣ ಭಾರತದ ಕುಂಭಮೇಳವನ್ನು ನಾಡಹಬ್ಬವಾಗಿ ಆಚರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಯೋಜನೆ ರೂಪಿಸಿ ಅನುದಾನ ತರಲು ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆಯಲಾಗುವುದು.
ಡಾ.ಎಚ್.ಸಿ.ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವ
ತರಾತುರಿಯಿಂದ ಪ್ರಯೋಜನವಿಲ್ಲ
ಉತ್ತರ ಭಾರತದ ಮಾದರಿಯಲ್ಲಿ ತ್ರಿವೇಣಿ ಸಂಗಮದಲ್ಲಿ ದೇಶಾದ್ಯಂತ ಇರುವ ಸಾಧು-ಸಂತರು ಸಮಾಗಮಗೊಳ್ಳಬೇಕು. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಪುಣ್ಯ ಸ್ನಾನ ಮಾಡಬೇಕೆಂದರೆ ದಕ್ಷಿಣ ಭಾರತದ ಕುಂಭಮೇಳ ಅದ್ದೂರಿಯಾಗಿ ಆಯೋಜನೆಗೊಳ್ಳಬೇಕು. ತಿ.ನರಸೀಪುರದಲ್ಲಿ ಶಾಶ್ವತ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳಬೇಕಾದರೆ ಸರ್ಕಾರವನ್ನು ಗಂಭೀರವಾಗಿ ಒತ್ತಾಯಿಸಬೇಕು. ತರಾತುರಿಯಲ್ಲಿ ಬಂದು ಕುಂಭಮೇಳ ಮಾಡಿ ಹೋಗುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮೈಸೂರಿನ ಸಭೆಯಲ್ಲಿ ಸುತ್ತೂರು ಹಾಗೂ ಆದಿಚುಂಚನಗಿರಿ ಶ್ರೀಗಳ ಸಮ್ಮುಖದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಗುರು ಪರಂಪರೆಯುಳ್ಳ ಮಠಗಳು ತ್ರಿವೇಣಿ ಸಂಗಮದ ಅಭಿವೃದ್ಧಿಗೆ ವಿಶೇಷ ಗಮನ ನೀಡುವಂತೆಯೂ ಒತ್ತಾಯಿಸಿದ್ದೇನೆ.
ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಶ್ರೀ ಸೂರ್ಯಸಿಂಹಾಸನ ಮಠ, ವಾಟಾಳು
ಸಂಬಂಧಿಸಿದವರು ಚಿಂತನೆ ನಡೆಸಲಿ
ಕಳೆದ ಹನ್ನೊಂದು ಕುಂಭಮೇಳ ಉತ್ಸವ ಸರ್ಕಾರದ ಪ್ರಾಯೋಜಕತ್ವ, ವಿವಿಧ ಮಠಾಧೀಶರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನಡೆದಿದ್ದರೂ ಸರ್ಕಾರದ ಗೆಜೆಟ್ ನೋಟೀಫಿಕೇಷನ್‌ನಲ್ಲಿ ಪ್ರಕಟಗೊಂಡಿಲ್ಲ. ಆಡಳಿತರೂಢ ಸರ್ಕಾರ ಯಾವುದೇ ಇರಲಿ, ದಕ್ಷಿಣ ಭಾರತದ ಕುಂಭಮೇಳವನ್ನು ಸರ್ಕಾರದ ಹಬ್ಬವೆಂದು ನೋಟಿಫಿಕೇಶನ್ ಹೊರಡಿಸಿದರೆ ನಾಡ ಹಬ್ಬದ ಮಾನ್ಯತೆ ಸಿಕ್ಕಿದಂತಾಗುತ್ತದೆ. ಕುಂಭಮೇಳ ಉತ್ಸವವನ್ನು ನಾಡ ಹಬ್ಬವನ್ನಾಗಿಸುವ ಬಗ್ಗೆ ಹರಗುರು ಚರಮೂರ್ತಿಗಳು ಹಾಗೂ ಈಗಿನ ಜನಪ್ರತಿನಿಧಿಗಳು ಚಿಂತನೆ ಮಾಡಬೇಕು.
ಚೌಹಳ್ಳಿ ಜಿ.ರವಿಶಂಕರ್ ಅಪರ ಸರ್ಕಾರಿ ವಕೀಲ, ತಿ.ನರಸೀಪುರ
ವಿಶೇಷ ಕಾರ್ಯಕ್ರಮ ರೂಪಿಸಲಿ
ತ್ರಿವೇಣಿ ಸಂಗಮದ ಸುತ್ತಲೂ ಇರುವ ದೇವಾಲಯಗಳನ್ನು ಕೇಂದ್ರೀಕರಿಸಿ, ಪ್ರಮುಖ ಯಾತ್ರಾ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸಬೇಕು. ಕಾವೇರಿ, ಕಪಿಲಾ ಹಾಗೂ ಸ್ಫಟಿಕ ನದಿಗಳ ಸಂಗಮ ಕ್ಷೇತ್ರ ಯಜ್ಞ-ಯಾಗ ಮತ್ತು ಪುಣ್ಯಸ್ನಾನ ಮಾಡಲಿಕಷ್ಟೇ ಸೀಮಿತವಾಗಬಾರದು. ಬದಲಾಗಿ ಪ್ರಮುಖ ಆಕರ್ಷಣೀಯ ಕೇಂದ್ರವಾಗಬೇಕು. ಕುಂಭಮೇಳ ಉತ್ಸವದ ರೂವಾರಿಗಳಾಗಿರುವ ವಿವಿಧ ಮಠಗಳ ಮಠಾಧೀಶರು ತಿರುಮಕೂಡಲು ನರಸೀಪುರವನ್ನು ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಮಹತ್ವದ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.
ಎಸ್.ಜಗದೀಶ್ ಹಿರಿಯ ನಾಗರಿಕ, ತಿ.ನರಸೀಪುರ ಟೌನ್
ಜನರಲ್ಲಿ ಜಾಗೃತಿ ಮೂಡಿಸಲಿ
ಕುಂಭಮೇಳದಲ್ಲಿ ಜನರು ಪುಣ್ಯ ಸ್ನಾನ ಮಾಡುವುದರಿಂದ ತ್ರಿವೇಣಿ ಸಂಗಮದ ನದಿಯಲ್ಲಿ ಸ್ವಚ್ಛತೆ ಕಾಪಾಡಲು ಮೊದಲ ಆದ್ಯತೆ ನೀಡಬೇಕು. ನದಿಯನ್ನು ಕಲುಷಿತಗೊಳಿಸದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಕೈಗಾರಿಕೆಗಳು ಮತ್ತು ಚರಂಡಿಗಳ ತ್ಯಾಜ್ಯ ನೀರು ನದಿ ಸೇರಿದಂತೆ ಯೋಜನೆ ರೂಪಿಸಬೇಕು. ಕೋಮಿಗೊಂದು, ಜಾತಿಗೊಂದು ಪ್ರಾಧಿಕಾರವನ್ನು ರಚಿಸುವ ಸರ್ಕಾರ, ಕುಂಭಮೇಳದಂತಹ ಪ್ರಮುಖ ಉತ್ಸವ ನಡೆಯುವ ನರಸೀಪುರದಲ್ಲೊಂದು ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮೂಲಕ ನಾಡಹಬ್ಬವೆಂದು ಘೋಷಿಸಬೇಕು.
ಎಂ.ಪಿ.ದೀಪಕ್ ಪುಟ್ಟಸ್ವಾಮಿ ಅಧ್ಯಕ್ಷ, ರಾಷ್ಟ್ರೀಯ ಅಹಿಂದ ಒಕ್ಕೂಟ, ಮೈಸೂರು
ಇದೊಂದು ಹೆಮ್ಮೆಯ ವಿಚಾರ
ತ್ರಿವೇಣಿ ಸಂಗಮದಲ್ಲಿನ ಕುಂಭಮೇಳ ಉತ್ಸವ ತಿ.ನರಸೀಪುರದ ಹಿರಿಮೆಯನ್ನು ಹೆಚ್ಚಿಸಿದ್ದು, ಫೆಬ್ರವರಿಯಲ್ಲಿ 12ನೇ ಕುಂಭಮೇಳ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ನರಸೀಪುರದ ಕುಂಭಮೇಳ ದಕ್ಷಿಣ ಭಾರತದ ಏಕೈಕ ಕುಂಭಮೇಳವಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ತ್ರಿವೇಣಿ ಸಂಗಮಕ್ಕೆ ಶಾಶ್ವತ ಯೋಜನೆ ರೂಪಿಸಿ, ನಾಡ ಹಬ್ಬವಾಗಿ ಘೋಷಣೆ ಮಾಡಬೇಕು.
ಬಿ.ವಸಂತಾ ಶ್ರೀಕಂಠ ಅಧ್ಯಕ್ಷೆ, ತಿ.ನರಸೀಪುರ ಪುರಸಭೆ
ಕಾರ್ಯರೂಪಕ್ಕೆ ಬಾರದ ಭರವಸೆ
ಕಾವೇರಿ, ಕಪಿಲಾ ಹಾಗೂ ಸ್ಫಟಿಕ ಸರೋವರ ನದಿಗಳು ಸಂಗಮಗೊಳ್ಳುವ ತ್ರಿವೇಣಿ ಸಂಗಮದಂತಹ ಪವಿತ್ರ ಕ್ಷೇತ್ರದಲ್ಲಿ ಹನ್ನೊಂದು ಕುಂಭಮೇಳ ನಡೆದಿದ್ದು, ಲಕ್ಷಾಂತರ ಭಕ್ತರು ಪುಣ್ಯ ಸ್ನಾನ ಮಾಡಿ, ಪುನೀತರಾಗಿದ್ದಾರೆ. ಈ ಎಲ್ಲ ಉತ್ಸವಗಳ ಧಾರ್ಮಿಕ ಸಭೆಗಳಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳ ಹಾದಿಯಾಗಿ ಜನಪ್ರತಿನಿಧಿಗಳು ಮಠಾಧೀಶರ ಸಮ್ಮುಖದಲ್ಲಿ ನಾಡ ಹಬ್ಬದ ಘೋಷಣೆ ಆಶ್ವಾಸನೆ ಕಾರ್ಯರೂಪಕ್ಕೆ ಬಂದಿಲ್ಲ. ದಕ್ಷಿಣ ಭಾರತದ ಕುಂಭಮೇಳಕ್ಕೆ ದೇಶದಾದ್ಯಂತ ಭಕ್ತಸಾಗರ ಹರಿದು ಬರುವಂತಾಗಲು ಈ ಬಾರಿಯಾದರೂ ಕುಂಭಮೇಳ ನಾಡಹಬ್ಬವಾಗಿ ಘೋಷಣೆಯಾಗಬೇಕು.
ಹೇಮಾ ಮೂರ್ತಿ ಮುಖ್ಯ ಶಿಕ್ಷಕಿ, ಎನ್‌ಕೆಎಫ್ ಪಬ್ಲಿಕ್ ಸ್ಕೂಲ್, ತಿ.ನರಸೀಪುರ
ಹೆಚ್ಚಿನ ಅನುದಾನ ಮಂಜೂರಾಗಲಿ
ಧಾರ್ಮಿಕ ಉತ್ಸವವನ್ನು ನಾಡಹಬ್ಬವಾಗಿ ಘೋಷಣೆ ಮಾಡುವುದರಿಂದ ಅಥವಾ ಪ್ರಾಧಿಕಾರದ ರಚನೆಯಿಂದ ಉತ್ಸವ ಮತ್ತಷ್ಟು ಮೆರುಗು ಪಡೆದುಕೊಳ್ಳಲಿದೆ. 80ರ ದಶಕದಿಂದಲೂ ಆಚರಣೆಯಾಗುತ್ತಿರುವ ಕುಂಭಮೇಳ ಉತ್ಸವವನ್ನು ರಾಜ್ಯ ಸರ್ಕಾರ ನಾಡ ಹಬ್ಬವನ್ನಾಗಿ ಆಚರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಶಾಶ್ವತ ಯೋಜನೆ ರೂಪಿಸುವಂತೆ ಧಾರ್ಮಿಕ ಇಲಾಖೆಗೆ ಸೂಚಿಸಿ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಬೇಕು. ಈ ಭಾಗದ ಶಾಸಕರಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪ ಅವರು ತ್ರಿವೇಣಿ ಸಂಗಮದ ಅಭಿವೃದ್ಧಿಗೆ ಮತ್ತೊಂದು ಯೋಜನೆಯನ್ನು ರೂಪಿಸಬೇಕು.
ಕುಪ್ಯ ಭಾಗ್ಯಮ್ಮ, ನಾಮನಿರ್ದೇಶಿತ ಸದಸ್ಯೆ, ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ
ಧಾರ್ಮಿಕ ಪರಂಪರೆ ವಿಸ್ತಾರಗೊಳ್ಳಲಿ
ಧಾರ್ಮಿಕ ಕ್ಷೇತ್ರದ ಪರಂಪರೆ ವಿಸ್ತಾರಗೊಳ್ಳಲು ಪ್ರವಾಸೋದ್ಯಮದ ಯೋಜನೆಯ ಅಗತ್ಯವಿದೆ. ದಕ್ಷಿಣ ಪ್ರಯಾಗ, ಕಾಶಿಗಿಂತಲೂ ಗುಲಗಂಜಿಯಷ್ಟು ಪುಣ್ಯಕ್ಷೇತ್ರವೆಂದು ಕರೆಯಲ್ಪಡುವ ತ್ರಿವೇಣಿ ಸಂಗಮದ ಕುಂಭಮೇಳ ಸರ್ಕಾರದ ಅಧಿಕೃತ ಉತ್ಸವವಾಗಬೇಕು. ಧಾರ್ಮಿಕತೆ ಜತೆಗೆ ಪ್ರವಾಸಿ ಕೇಂದ್ರವಾಗಿಯೂ ತ್ರಿವೇಣಿ ಸಂಗಮ ಅಭಿವೃದ್ಧಿಗೊಳ್ಳಲು ರಾಜ್ಯ ಸರ್ಕಾರ ವಿಶೇಷ ಯೋಜನೆಯನ್ನು ಜಾರಿಗೆ ತರಬೇಕು.
ಕುಮಾರ್ ರಾಮೇಗೌಡ, ಯುವ ಬ್ರಿಗೇಡ್ ಸಂಚಾಲಕ, ತಿ.ನರಸೀಪುರ
ಹೆಚ್ಚಲಿದೆ ಆರ್ಥಿಕ ಚಟುವಟಿಕೆ
ಕುಂಭಮೇಳ ನಡೆಯುವ ತಿ.ನರಸೀಪುರ ಪಟ್ಟಣ, ತಲಕಾಡು ಹಾಗೂ ಸೋಮನಾಥಪುರದಂತಹ ಪ್ರಮುಖ ಧಾರ್ಮಿಕ ದೇವಾಲಯಗಳಿದ್ದು, ಪ್ರವಾಸಿ ತಾಣವಾಗಿ ರೂಪುಗೊಳ್ಳಬೇಕು. ಪ್ರವಾಸೋದ್ಯಮದಿಂದ ಸ್ಥಳೀಯವಾಗಿ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳು ಹೆಚ್ಚಾಗಲಿವೆ. ಹೀಗಾಗಿ ಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ದಕ್ಷಿಣ ಭಾರತದ ಕುಂಭಮೇಳವನ್ನು ನಾಡ ಹಬ್ಬವನ್ನಾಗಿ ಘೋಷಣೆ ಮಾಡಬೇಕು.
ಕೆ.ಅಶ್ವಿನ್‌ಕುಮಾರ್ ನಿರ್ದೇಶಕ ತಾಲೂಕು ಕುರುಬರ ಸಂಘ