

ವಿರಾಜಪೇಟೆ: ಕೊಡವ ಜನಾಗದವರಲ್ಲಿ ಮದ್ಯಸೇವನೆಯೂ ಒಂದು ಸಂಸ್ಕೃತಿಯ ಭಾಗವೆಂದು ಬಿಂಬಸಿ ಅದನ್ನೇ ಒಂದು ಚಟವಾಗಿ ಬೆಳಸಿಕೊಳ್ಳಬಾರದು. ಇಂದು ಆರೋಗ್ಯ ಅತ್ಯಂತ ಮುಖ್ಯವಾದ್ದು ವೈದ್ಯಕೀಯ ವೆಚ್ಚ ಕೈಗೆಟುಕದಂತಹ ಸ್ಥಿತಿಯಲ್ಲಿದೆ ಎಂಬುದನ್ನು ಮನ ಗಾಣಬೇಕೆಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಹೇಳಿದರು.
ವಿರಾಜಪೇಟೆ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಸಮಾಜ್ ಪೊಮ್ಮಕ್ಕಡ ಕೂಟದಿಂದ ಸೋಮವಾರ ಆಯೋಜಿಸಿದ್ದ ಕಕ್ಕಡ ಪದಿನೆಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದೆ ಈ ಕಕ್ಕಡ ಪದಿನೆಟ್ ಹಬ್ಬದ ಆಚರಣೆಯ ಮಹತ್ವ ಕೊಡವರಿಗೆ ಮಾತ್ರ ಅರಿವಿತ್ತು. ಆದರೆ ಇಂದು ಕೊಡಗಿನಲ್ಲಿ ಎಲ್ಲ ಜನಾಂಗದವರು ಈ ಆಚರಿಸುತ್ತಿದ್ದಾರೆ. ಕೊಡಗಿನಲ್ಲಿ ಬಹುತೇಕ ಯುವ ಜನರು ಉದ್ಯೋಗ ನಿಮಿತ್ತ ಜಿಲ್ಲೆಯಿಂದ ಹೊರಗೆ ಉಳಿದಿದ್ದು, ಇಲ್ಲಿರುವ ವಯೋವೃದ್ಧರು ಈ ಆಚರಣೆ ಮುಂದುವರಿಸಿದ್ದಾರೆ. ಆದರೆ ಹಿಂದಿನ ಈ ವಿಶಿಷ್ಟ ಆಚರಣೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ. ಜತೆಗೆ ಆರೋಗ್ಯದ ವಿಚಾರದಲ್ಲಿ ಎಲ್ಲರು ಖರ್ಚು ವೆಚ್ಚ ಭರಿಸಲು ಆರೋಗ್ಯ ವಿಮೆ ಅಗತ್ಯತೆ ಇದೆ ತಿಳಿಸಿದರು.
ವಕೀಲೆ ಮತ್ತು ಚಲನ ಚಿತ್ರ ನಿರ್ದೇಶಕಿ ಪಟ್ಟಡ ರೀನಾ ಪ್ರಕಾಶ್ ಮಾತನಾಡಿ, ಈ ಕಕ್ಕಡ ಪದಿನೆಟ್ ಆಚರಣೆ ಅತ್ಯಂತ ವಿಶಿಷ್ಟವಾಗಿದ್ದು. ಅಂದಿನ ಕಾಲಘಟ್ಟದಲ್ಲಿ ಆಚರಣೆಗೆ ಅದರದೇ ಮಹತ್ವ ಮತ್ತು ಹಿನ್ನೆಲೆ ಇತ್ತು. ಅಲ್ಲದೆ ಜತೆಗೆ ನಮ್ಮ ಉಡಪು, ಆಚಾರ -ವಿಚಾರ ಸಂಸ್ಕೃತಿ ಹಬ್ಬಗಳ ಆಚರಣೆ ತನ್ನದೇ ಆದ ವಿಶಿಷ್ಟತೆ ಹೊಂದಿದೆ. ಕೊಡಗಿನಲ್ಲಿ ಜನರನ್ನು ಅವರ ಮನೆಯ ಹೆಸರಿನಲ್ಲಿ ಗುರುತಿಸುವುದು ಸಹ ವಿಶಿಷ್ಟವೇ ಆಗಿದೆ. ಇದನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಪರಿಚಯಿಸಬೇಕು. ಕೊಡವರಿಗೆ ನೆಡಿಕೇರಿಯಂಡ ಚಿಣ್ಣಪ್ಪನವರ ಪಟ್ಟೋಳೆ ಪಳಮೆ ಪವಿತ್ರ ಗ್ರಂಥವೇ ಆಗಿದೆ. ಇದೇ ಗ್ರಂಥದಲ್ಲಿನ ಕೊಡವರ ದುಡಿ ಮಹಿಳೆಯರ ಆಭರಣ ಪತ್ತಾಕ್ ಇವುಗಳ ಮಹತ್ವದ ಬಗ್ಗೆ ಮಾಹಿತಿಯನ್ನು ಆಧರಿಸಿ ಕಲ್ಲಕೆರೆ ಮಹಾದೇವಿ ಚಿತ್ರ ತಯಾರಿಸಲು ಪ್ರೇರಣೆಯಾತು ಎಂದರು.
ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ, ಅಖಿಲಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ, ಅಖಿಲ ಕೊಡವ ಸಮಾಜದ ಜಂಟಿ ಕಾರ್ಯದರ್ಶಿ ನಂದೇಟಿರ ರಾಜ ಮಾದಪ್ಪ ಮಾತನಾಡಿದರು. ಸಮಾಜ ಸೇವಕಿ ಕೊಣಿಯಂಡ ಬೋಜಮ್ಮ ಕಕ್ಕಡ ಹಬ್ಬದ ಕುರಿತು ಉಪನ್ಯಾಸ ನೀಡಿದರು.
ಕಕ್ಕಡ ಆಚರಣೆ ಪ್ರಯುಕ್ತ ಕಕ್ಕಡ ಪಾಯಸ, ಕೊಳಿಕರಿ ಪಾಪುಟ್ಟು, ಚಕ್ಕೆಕುರುಪಜ್ಜಿ ಮದ್‌ಪುಟ್ಟ್, ಪಂದಿಕರಿ ಕಡಂಬುಟ್ಟ್, ಈಗೆ ಹಲವು ಕೊಡಗಿನ ವಿಶಿಷ್ಟ ಖಾದ್ಯಗಳ ಊಟೋಪಚಾರ ಪ್ರದರ್ಶನ ಏರ್ಪಡಿಸಲಾಗಿತ್ತು.