ವಿದ್ಯಾರ್ಥಿಗಳಿಗೆ ಪ್ರೇರಣೆಯ ಮೂಲ ಆಗಲಿ ಪೂರ್ವಜರ ಜ್ಞಾನ

15 smg 10
ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಇಂಜಿನಿಯರ್ಸ್‌ ದಿನಾಚರಣೆಯನ್ನು ವೆಂಕಪ್ಪಯ್ಯ ಆರ್.ದೇಸಾಯಿ ಉದ್ಘಾಟಿಸಿದರು. ಜಿ.ಎಸ್.ನಾರಾಯಣ ರಾವ್, ಎಸ್.ಎನ್.ನಾಗರಾಜ, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಡಾ.ಪಿ.ನಾರಾಯಣ್, ಡಿ.ಜಿ.ರಮೇಶ್ ಇತರರಿದ್ದರು.
Published on

ಶಿವಮೊಗ್ಗ: ನಮ್ಮ ಪೂರ್ವಜರು ಬಿಟ್ಟು ಹೋಗಿರುವ ಜ್ಞಾನದಿಂದ ಪ್ರೇರಣೆ ಪಡೆಯಬೇಕು. ಪೂರ್ವಜರ ಚಿಂತನೆಗಳೊಂದಿಗೆ ಹೊಸತಲೆಮಾರಿನ ನಾವೀನ್ಯ ಪ್ರಯೋಗಗಳು ವಿದ್ಯಾರ್ಥಿಗಳದ್ದಾಗಲಿ ಎಂದು ಧಾರವಾಡ ಐಐಟಿ ನಿರ್ದೇಶಕ ವೆಂಕಪ್ಪಯ್ಯ ಆರ್.ದೇಸಾಯಿ ತಿಳಿಸಿದರು.

ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಓರಿಯೆಂಟೇಷನ್ ಹಾಗೂ ಇಂಜಿನಿಯರ್ಸ್‌ ಡೇ ಉದ್ಘಾಟಿಸಿ ಮಾತನಾಡಿ, ನಮ್ಮ ಪೂರ್ವಜರ ಶಿಕ್ಷಣ ಪದ್ಧತಿಯ ನಾವೀನ್ಯ ಚಿಂತನೆಗಳನ್ನು ಮರೆಯುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಆಧುನಿಕತೆಯ ಭರದಲ್ಲಿರುವ ನಾವು ಕಲ್ಪನಾ ದಾರಿದ್ರೃದಿಂದ ಹೊರಬರಬೇಕಿದೆ. ನಮ್ಮ ಪೂರ್ವಜರು ಅಖಂಡ ಶಿಲೆಗಳನ್ನು ವೈಜ್ಞಾನಿಕವಾಗಿ ಕೊರೆದು ಸುಂದರ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಸಾವಿರ ವರ್ಷಗಳ ಹಿಂದೆಯೇ ನಾಲ್ಕು ತಲೆಮಾರುಗಳು ಅದ್ಭುತ ಚಿಂತನೆಗಳೊಂದಿಗೆ ಅತ್ಯುತ್ತಮ ಕಲಾಕೃತಿಗಳನ್ನು, ಕಟ್ಟಡ, ದೇವಾಲಯಗಳನ್ನು ಸೃಷ್ಟಿಸಿದ ನಿದರ್ಶನಗಳಿವೆ ಎಂದರು.
ಹೊಸತಲೆಮಾರಿನ ನಾವೀನ್ಯ ಚಿಂತನೆಗಳಲ್ಲಿ ಪರಿಸರದ ನಡುವಿನ ಅನೇಕ ಸವಾಲುಗಳಿಗೆ ತಾಂತ್ರಿಕ ಪರಿಹಾರ ನೀಡಲಾಗುತ್ತಿದೆ. ಟಾಟಾ ಕಂಪನಿ ತನ್ನ ಸಂಪೂರ್ಣ ಕಾರ್ಖಾನೆಗಳ ಪ್ರಾಂಗಣದಲ್ಲಿ ಸ್ವಯಂ ವಿದ್ಯುತ್ ಉತ್ಪಾದನೆ ಮತ್ತು ನೀರು ರಹಿತ ಶೌಚಗೃಹಗಳ ನಿರ್ಮಾಣ ಮಾಡಿದೆ. ಜಪಾನ್‌ನಲ್ಲಿ ಪ್ರತಿಯೊಂದು ಶಾಲೆಯಲ್ಲೂ ಸ್ವಯಂ ಸ್ವಚ್ಛತಾ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಗಾಂಧೀಜಿಯವರ ಕರೆಯ ಮೇರೆಗೆ ಸ್ಥಾಪಿಸಲ್ಪಟ್ಟ ಎನ್‌ಇಎಸ್ ಸಂಸ್ಥೆ ಎಲ್ಲರಿಗೂ ಕೈಗೆಟುಕುವ ರೀತಿಯಲ್ಲಿ ಶಿಕ್ಷಣ ನೀಡುತ್ತಿದೆ. ಹೊಸ ತಾಂತ್ರಿಕ ವಿಷಯಗಳನ್ನು ಅಳವಡಿಸಿಕೊಳ್ಳುತ್ತಿದೆ ಎಂದರು.
ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಹಾಗೂ ಆರು ಚಿನ್ನದ ಪದಕ ಪಡೆದ ಪಾರ್ವತಿ ಸಲೆರಾ ಹಾಗೂ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ 9ನೇ ರ‌್ಯಾಂಕ್ ಪಡೆದ ಸ್ಮತಿ.ಕೆ.ವಂತಕರ್ ಅವರನ್ನು ಅಭಿನಂದಿಸಲಾಯಿತು.
ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಎನ್.ಟಿ.ನಾರಾಯಣರಾವ್, ಎಚ್.ಸಿ.ಶಿವಕುಮಾರ್, ಮಧು ರಾವ್, ಎಂ.ಆರ್.ಸೀತಾಲಕ್ಷ್ಮೀ, ಕುಲಸಚಿವ ಪ್ರೊ. ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಪ್ರಾಚಾರ್ಯ ಡಾ. ಪಿ.ಮಂಜುನಾಥ ಇದ್ದರು.

ಎನ್‌ಇಎಸ್ ಅಮೃತ ಮಹೋತ್ಸವ ಸವಿನೆನಪಿನಲ್ಲಿ ಎನ್‌ಇಎಸ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ವಿವಿ ಮಟ್ಟದಲ್ಲಿ ಪ್ರಥಮ ರ‌್ಯಾಂಕ್ ಪಡೆದರೆ ಈ ವರ್ಷದಿಂದಲೇ ಎನ್‌ಇಎಸ್ ಅಮೃತ ಚಿನ್ನದ ಪದಕ ನೀಡಿ ಅಭಿನಂದಿಸಲಾಗುತ್ತದೆ. ಆ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಲಾಗುವುದು.ಡಾ. ಪಿ.ನಾರಾಯಣ್, ಎನ್‌ಇಎಸ್ ಸಹ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net