

ಬೆಳಗಾವಿ: ಪದವೀಧರರು ತಮ್ಮ ಜ್ಞಾನ ಮತ್ತು ಕೌಶಲವನ್ನು ದೇಶದ ಹಿತಕ್ಕಾಗಿ ಬಳಸಬೇಕು ಎಂದು ಎಐಸಿಟಿಇ ಅಧ್ಯಕ್ಷ ಪ್ರೊ. ಟಿ.ಜಿ. ಸೀತಾರಾಮ್ ಹೇಳಿದರು.
ನಗರದ ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಜಿಐಟಿ) ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಶನಿವಾರ ಜಿಐಟಿಯ 8ನೇ ಪದವಿ ಪ್ರದಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿ, ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಹೊಸ ಯುಗಕ್ಕೆ ತಮ್ಮನ್ನು ತಾವು ನಿರಂತರವಾಗಿ ಅಣಿಯಾಗಬೇಕು. ಪದವೀಧರರು ಹೊಸ ಉದ್ಯಮ ಆರಂಭಿಸಬೇಕು ಎಂದರು.
1992ರ ಬ್ಯಾಚ್‌ನ ವಿದ್ಯಾರ್ಥಿ ಪರಾಗ್ ನಾಯಿಕ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ರಿಸ್ಕ್ ತೆಗೆದುಕೊಂಡು ಯಶಸ್ಸಿನತ್ತ ಸಾಗಬೇಕು. ಅದೇ ಸಮಯದಲ್ಲಿ ನೈತಿಕತೆ ಕಳೆದುಕೊಳ್ಳಬಾರದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲಾ ಸೊಸೈಟಿ ಅಧ್ಯಕ್ಷ ಅನಂತ ಮಂಡಗಿ, ಶೈಕ್ಷಣಿಕ ಮತ್ತು ವೃತ್ತಿಪರ ಶ್ರೇಷ್ಠತೆ ಉತ್ತೇಜಿಸಲು ಸೊಸೈಟಿಯ ಪ್ರಯತ್ನಗಳನ್ನು ತಿಳಿಸಿದರು.
ಪ್ರಾಚಾರ್ಯ ಡಾ. ಎಂ.ಎಸ್. ಪಾಟೀಲ, ಕರ್ನಾಟಕ ಲಾ ಸೊಸೈಟಿ ಕಾರ್ಯಾಧ್ಯಕ್ಷ ಪ್ರದೀಪ ಸಾವ್ಕರ, ಉಪಾಧ್ಯಕ್ಷ ರಾಮ್ ಭಂಡಾರೆ, ಡಿ.ವಿ. ಕುಲಕರ್ಣಿ, ಕಾರ್ಯದರ್ಶಿ ವಿ.ಜಿ. ಕುಲಕರ್ಣಿ, ಎಸ್.ವಿ. ಗಣಾಚಾರಿ, ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಪ್ರಮೋದ ಕಠಾರಿ ಇತರರಿದ್ದರು. ಸೊಸೈಟಿಯ ವಿವಿಧ ಅಂಗ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರು, ಅಧ್ಯಾಪಕರು, ವಿದ್ಯಾರ್ಥಿಗಳು ಇದ್ದರು. 972 ಪದವೀಧರರು ಮತ್ತು 265 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ನೀಡಿ ಗೌರವಿಸಲಾಯಿತು.