ಕನ್ನಡಿಗರು ಆತ್ಮಾವಲೋಕನ ಮಾಡಿಕೊಳ್ಳಲಿ

HKR JILLA SAMMELANA
Published on

 ಹಿರೇಕೆರೂರ: ಮನುಷ್ಯನಲ್ಲಿರುವ ಆಸಕ್ತಿ, ಅಭಿರುಚಿ, ಚಿಂತನೆ ಇಂದು ಯಾವ ಕಡೆ ಹೋಗುತ್ತಿವೆ ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಭಾಷೆ, ನೆಲ, ಜಲ, ನಾಡಿಗೆ ತೊಂದರೆ, ಸಮಸ್ಯೆಗಳಾದಲ್ಲಿ ಪ್ರತಿಯೊಬ್ಬ ಕನ್ನಡಿಗರು ಅದರ ವಿರುದ್ಧ ಧ್ವನಿ ಎತ್ತಬೇಕು ಎಂದು ತಿಪ್ಪಾಯಿಕೊಪ್ಪ ಗುರುಮೂಕಪ್ಪ ಶಿವಯೋಗಿಗಳ ಮಠದ ಮಹಾಂತ ಸ್ವಾಮೀಜಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ನಿಂದ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಎಲ್ಲರಲ್ಲಿ ಕನ್ನಡಾಭಿಮಾನದ ಬಗ್ಗೆ ಆಸಕ್ತಿ ಹೆಚ್ಚಬೇಕಿದೆ. ಮಾತೃ ಭಾಷೆಯನ್ನು ಗೌರವಿಸುವುದರೊಂದಿಗೆ ಮನೆಯಲ್ಲಿ ಕನ್ನಡದಲ್ಲಿ ಮಾತನಾಡಬೇಕು. ಅನ್ಯ ಭಾಷಿಗರು ಅವರ ಭಾಷೆಯ ಮೇಲೆ ಸಾಕಷ್ಟು ಗೌರವ, ಪ್ರೀತಿ ಇಟ್ಟುಕೊಂಡಿದ್ದು, ಅವರು ಬರೀ ವ್ಯವಹರಿಸಲು ಮಾತ್ರ ಅನ್ಯ ಭಾಷೆ ಬಳಸುತ್ತಾರೆ. ಇಂದಿನ ಯುವಪೀಳಿಗೆಗೆ ಸಾಹಿತ್ಯಾಸಕ್ತಿ, ಸಂಸ್ಕೃತಿ, ಭಾಷೆಯ ಬಗ್ಗೆ ತಿಳಿಹೇಳಬೇಕು ಎಂದರು.

ಹಂಸಭಾವಿ ಹೋಬಳಿ ಘಟಕದ ಕಸಾಪ ಅಧ್ಯಕ್ಷ ಪ್ರಭುಸ್ವಾಮಿ ಹಾಲೇವಾಡಿಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಡು, ನುಡಿ, ಜಲ, ನೆಲ ರಕ್ಷಣೆಗೆ ಸದಾ ಎಲ್ಲರೂ ಬದ್ಧರಾಗಿರಬೇಕು ಎಂದರು.

ಸಿಇಎಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ ಮಾತನಾಡಿ, ಪ್ರತಿಯೊಬ್ಬರು ಟಿವಿ ಧಾರವಾಹಿ ಮತ್ತು ಮೊಬೈಲ್​ಫೋನ್ ಬಿಟ್ಟು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಕಸಾಪ ತಾಲೂಕಾಧ್ಯಕ್ಷ ಎನ್. ಸುರೇಶಕುಮಾರ, ಕಾರ್ಯದರ್ಶಿಗಳಾದ ಪಿ.ಎಸ್. ಸಾಲಿ, ಎಂ.ಎಂ. ಮತ್ತೂರ, ರಾಜು ಬಸಪ್ಪನವರ, ಅನುರಾಧಾ ಬಡಿಗೇರ, ರಾಮಪ್ಪ ಎಸ್., ಕೆ.ವಿ. ವರಾಹದ, ಗಿರೀಶ ಇಂಡಿಮಠ, ಸುಭಾಸ ಮಡಿವಾಳರ, ಡಾ.ಎಸ್.ಪಿ. ಗೌಡರ ಹಾಗೂ ಕಸಾಪ ಪದಾಧಿಕಾರಿಗಳು ಇದ್ದರು.

ಶಿಕ್ಷಕರಾದ ಜಗದೀಶ ಕಠಾರೆ, ಬಿ.ಎಂ. ಮುದುಕನಗೌಡ್ರ, ಕಾಂತೇಶ ಕೋಲಪ್ಪನವರ, ಎಂ.ಸಿ. ಮುದಿಗೌಡ್ರ, ಸಿದ್ದು ಬಳ್ಳಾರಿ, ಪರಮೇಶ್ವರಪ್ಪ ಹುಲ್ಮನಿ, ಹನುಮಂತ ಎಸ್. ಕಾರ್ಯಕ್ರಮ ನಿರ್ವಹಿಸಿದರು.

ನಂತರ ಬಸವರಾಜ ಶಿಗ್ಗಾಂವಿ ಅವರಿಂದ ತತ್ವಪದ, ದುರ್ಗಾಮಾತಾ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ‘ಓಂ ಶಕ್ತಿ ದುರ್ಗಾ ಶಕ್ತಿ’ ಸೇರಿ ವಿವಿಧ ಶಾಲಾ ಮಕ್ಕಳಿಂದ ನೃತ್ಯ, ಸಾಂಸ್ಕೃತಿಕ ಮತ್ತು ಮನೋರಂಜನೆ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net