

ಬಣಕಲ್: ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ-50 ರ ಸಂಭ್ರಮದ ಕನ್ನಡ ಜ್ಯೋತಿ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸಿ ಕನ್ನಡ ಜಾಗೃತಿ ಮೂಡಿಸಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ಎಂಬ ಹೆಸರು ಘೋಷಣೆಯಾದ 50 ವರ್ಷದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಕನ್ನಡದ ಹಿರಿಮೆ, ಗರಿಮೆ, ಕನ್ನಡ ಶಕ್ತಿ, ಕನ್ನಡದ ಮಣ್ಣಿನ ವಾಸನೆಯ ಪರಿಕಲ್ಪನೆಯನ್ನು ಈ ರಥಯಾತ್ರೆ ಸಾರುತ್ತದೆ ಎಂದು ಹೇಳಿದರು.
ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳಿರುವ ಕನ್ನಡ ಭಾಷೆ ಬಗ್ಗೆ ಹೆಮ್ಮೆ ಮೂಡುತ್ತದೆ. ಕನ್ನಡದ ರಥ ಸಂಚರಿಸಿದ ಕಡೆಗಳಲ್ಲಿ ಕನ್ನಡದ ವಾತಾವರಣ ಸೃಷ್ಟಿಯಾಗಲಿ. ಕನ್ನಡದ ಶಕ್ತಿ ಸಾಮರ್ಥ್ಯಗಳು ವೃದ್ಧಿಸಲಿ. ಕನ್ನಡ ಭಾಷೆ ಕರ್ನಾಟಕದಲ್ಲಿ ಮಾತ್ರವಲ್ಲದೇ ಭಾರತದೆಲ್ಲಡೆ ಪ್ರಜ್ವಲಿಸುವಂತಹ ಸಂಭ್ರಮದ ಕ್ಷಣ ಮೂಡಿ ಬರಲಿ ಎಂದರು.
ಶಾಸಕ ಎಚ್.ಡಿ ತಮ್ಮಯ್ಯ ಮಾತನಾಡಿ, ಕನ್ನಡ ನಾಡು ನುಡಿಗೆ ತನ್ನದೇ ಆದ ಶ್ರೀಮಂತಿಕೆ ಇದೆ. ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಕನ್ನಡ ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗಲು ಶ್ರಮಿಸಬೇಕಿದೆ. ಕನ್ನಡ ಜ್ಯೋತಿ ರಥಯಾತ್ರೆಯೂ ಕರ್ನಾಟಕ ಎಂದು ನಾಮಕರಣಗೊಂಡ ಐತಿಹಾಸಿಕ ಕ್ಷಣವನ್ನು ಮೆಲುಕು ಹಾಕಲು ಮತ್ತು ಕನ್ನಡ ನಾಡು ನುಡಿಗೆ ದುಡಿದವರ ಸ್ಮರಣೆಗೆ ಕಾರಣವಾಗಲಿ ಎಂದರು.