ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಲಿ

mysore
Published on

ಮೈಸೂರು: ಕನ್ನಡದ ಆಚರಣೆ ನಿತ್ಯೋತ್ಸವವಾಗಬೇಕು ಎಂದು ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತ(ಆಡಳಿತ) ಜಿ.ಎಸ್.ಸೋಮಶೇಖರ್ ಹೇಳಿದರು.


ಗೋಪಾಲಸ್ವಾಮಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕದಲ್ಲಿ ನವೆಂಬರ್‌ನಲ್ಲಿ ಮಾತ್ರ ಕನ್ನಡದ ಜ್ವರ ಏರುತ್ತದೆ. ಬಳಿಕ ಇಳಿಯುತ್ತದೆ. ಇದು ಹೀಗೆ ಆಗಬಾರದು. ಕನ್ನಡದ ಆಚರಣೆ ನಿತ್ಯ ನಿರಂತರವಾಗಬೇಕು ಎಂದು ಸಲಹೆ ನೀಡಿದರು.


ಸ್ವಾತಂತ್ರ್ಯ ಪೂರ್ವದಿಂದಲೂ ಕನ್ನಡ ನಾಡಿನ ಐಕ್ಯತೆಯ ಯತ್ನ ನಿರಂತರವಾಗಿ ನಡೆದಿದ್ದು, ಕರ್ನಾಟಕ ಏಕೀಕರಣದ ಚರಿತ್ರೆಯನ್ನು ಎಲ್ಲರೂ ತಿಳಿಯುವುದು ಅಗತ್ಯವಾಗಿದೆ. ಕರ್ನಾಟಕ ಏಕೀಕರಣ ಮತ್ತು ನಾಮಕರಣದ ಸುದೀರ್ಘ ಹೋರಾಟದ ಫಲವಾಗಿ 1956ರ ನವೆಂಬರ್ 1ರಂದು ಹೊಸ ರಾಜ್ಯ ಅಸ್ತಿತ್ವಕ್ಕೆ ಬಂದಿತು ಎಂದರು.


ಭಾರತೀಯ ಭಾಷೆ ಮತ್ತು ಸಾಹಿತ್ಯಗಳಲ್ಲಿ ಉನ್ನತ ಶ್ರೇಣಿಯಲ್ಲಿ ಇರುವ ಕನ್ನಡ ಭಾಷೆಗೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಮಕ್ಕಳು ತಮ್ಮ ಭವಿಷ್ಯದ ಹಾದಿ ಕಂಡುಕೊಳ್ಳಲು ಭಾಷೆಗಳು ನೆರವಾಗಬೇಕು. ನಾವು ಕನ್ನಡದ ಅಸ್ಮಿತೆ ಉಳಿಸಿಕೊಳ್ಳುವುದರ ಜತೆಗೆ ಇತರ ಭಾಷೆ, ಸಂಸ್ಕೃತಿ ನಮ್ಮದಾಗಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.


ಗೋಪಾಲಸ್ವಾಮಿ ಸಮೂಹ ಸಂಸ್ಥೆಯ ಕರೆಸ್ಪಾಂಡೆಂಟ್ ಎನ್.ಆರ್.ಮಂಜುನಾಥ್, ಗೋಪಾಲಸ್ವಾಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುರೇಶ್ ಯಡಿಯಾಳ್, ಶೈಕ್ಷಣಿಕ ಸಲಹೆಗಾರರಾದ ಪ್ರೊ.ಟಿ.ಟಿ.ಥಾಮಸ್, ಡಾ.ಪಾಂಡುರಂಗ ವಿಠ್ಠಲ, ಕೆ.ಎನ್.ಕೃಷ್ಣಪ್ರಸಾದ್ ಇತರರು ಇದ್ದರು.


ಇದನ್ನೂ ಮುನ್ನ ಮೆರವಣಿಗೆ ನಡೆಯಿತು. ಸೈಕಲ್‌ನಲ್ಲಿ ಸ್ತಬ್ಧಚಿತ್ರ, ಕನ್ನಡ ಕವಿಗಳ ಭಾವಚಿತ್ರಗಳು, ಕಂಸಾಳೆ, ವೀರಭದ್ರನ ಕುಣಿತ, ಕೋಲಾಟ, ಬ್ಯಾಂಡ್‌ಸೆಟ್‌ಗಳೊಂದಿಗೆ ಭುವನೇಶ್ವರಿ ದೇವಿಯ ಮೆರವಣಿಗೆ ಶಾಲಾ ಆವರಣದಿಂದ ಹೊರಟು ನಂಜುಮಳಿಗೆ ವೃತ್ತ, 101 ಗಣಪತಿ ವೃತ್ತ, ಅಗ್ರಹಾರ ವೃತ್ತ, ಸಿದ್ದಪ್ಪ ಚೌಕ, ಆರ್‌ಟಿಒ ವೃತ್ತ, ಬಲ್ಲಾಳ ವೃತ್ತ ಹಾದು ಮತ್ತೆ ಶಾಲೆಯನ್ನು ತಲುಪಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net