

ವಿಜಯವಾಣಿ ಸುದ್ದಿಜಾಲ ಧಾರವಾಡ
ಆದಿಕವಿ ಪಂಪನನ್ನು ಹೊಸ ಕಾಲಕ್ಕೆ ತಕ್ಕಂತೆ ನೋಡುವ ಅಗತ್ಯವಿದೆ. ಪಂಪನು ದೇಶೀಯ ಮಾರ್ಗಗಳನ್ನು ಸೇರಿಸಿಕೊಂಡು ಅನೇಕ ಕೃತಿಗಳನ್ನು ರಚಿಸಿದನು. ಪಂಪನ ಸಾಹಿತ್ಯ ಸಂಸ್ಕೃತ ಸಾಹಿತ್ಯದಂತಿರುವುದು ವಿಶೇಷ ಎಂದು ಹಿರಿಯ ವಿಂದ್ವಾಸ ಡಾ. ಹಂಪ ನಾಗರಾಜಯ್ಯ ಅಭಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಆದಿಕವಿ ಪಂಪ ಅಧ್ಯಯನ ಪೀಠ ಉದ್ಘಾಟನೆ, ಗ್ರಂಥಗಳ ಲೋಕಾರ್ಪಣೆ, ಪಂಪನ ಭಾವಚಿತ್ರದ ಅನಾವರಣ ಮತ್ತು ಪಂಪ ವ್ಯಾಖ್ಯಾನ ಮಾಲೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತನ್ನ ಕೃತಿಗಳ ರಚನೆಯ ಕಾಲಕ್ಕೆ ಪಂಪ ಅರಿಕೇಸರಿಯ ಆಶ್ರಯದಲ್ಲಿದ್ದ. ಪಂಪ ಅರಿಕೇಸರಿಯ ಯೋಧ ಅಥವಾ ದಂಡನಾಯಕನಾಗಿದ್ದ ಎಂದು ತಿಳಿಯಬಹುದು. ಖಡ್ಗವನ್ನು ಹಿಡಿದು ಪರಾಕ್ರಮಿಯಾಗಿ ಯುದ್ಧ ಮಾಡಬಲ್ಲ ಪಂಪನು ಕನ್ನಡ ಭಾಷೆಯ ಮೇಲೆ ಅತ್ಯಂತ ಪ್ರೀತಿ ಹೊಂದಿದ್ದಲ್ಲದೆ, ಭಾಷೆಯ ಮೇಲೆ ಹಿಡಿತ ಸಾಧಿಸಿದ್ದ ಎಂದರು.
ಕವಿವಿ ಕುಲಪತಿ ಪ್ರೊ. ಕೆ.ಬಿ ಗುಡಸಿ ಮಾತನಾಡಿ, ಪ್ರಸ್ತುತ ಕಾಲೇಜು, ಪದವಿ ಪೂರ್ವ ಶಿಕ್ಷಣ ಹಂತದಲ್ಲಿ ಮತ್ತು ವಿಶ್ವ ವಿದ್ಯಾಲಯಗಳಲ್ಲಿ ಹಳೆಗನ್ನಡ ಭಾಷೆಯಲ್ಲಿ ಬೋಧನೆ ಮಾಡಬೇಕು.ವಿದ್ಯಾರ್ಥಿಗಳು ಭಾಷೆಯ ಹಿನ್ನಲೆ ತಿಳಿದುಕೊಳ್ಳಬೇಕು. ಪಂಪ ಅಧ್ಯಯನ ಪೀಠ ಪಂಪನ ವಿಚಾರಗಳನ್ನು ಪ್ರಚಾರಗೊಳಿಸುವಲ್ಲಿ ಪ್ರಯತ್ನಿಸಬೇಕು ಎಂದರು.
ಮೌಲ್ಯಮಾಪನ ಕುಲಸಚಿವ ಡಾ. ಎನ್.ವೈ. ಮಟ್ಟಿಹಾಳ ಮಾತನಾಡಿದರು. ಡಾ.ಶಾಂತಿನಾಥ ದಿಬ್ಬದ ಅವರು ಆದಿ ಕವಿ ಪಂಪನ ಜೀವನ ಚರಿತ್ರೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕವಿವಿ ಹಣಕಾಸು ಅಧಿಕಾರಿ ಡಾ. ಸಿ.ಕೃಷ್ಣಾ ನಾಯಕ, ಪಂಪ ಅಧ್ಯಯನ ಪೀಠದ ಸಂಯೋಜಕ ಡಾ. ಜೆ. ಎಂ.ನಾಗಯ್ಯ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಿಬ್ಬಂದಿ, ಇತರರು ಇದ್ದರು.