ಮಕ್ಕಳ ಸಮಸ್ಯೆ ಬಗ್ಗೆ ಶಾಸನ ಸಭೆಯಲ್ಲಿ ಚರ್ಚೆಯಾಗಲಿ

2 (2)
Published on


ಮಂಡ್ಯ : ಮಕ್ಕಳ ಸಮಸ್ಯೆಗಳ ಕುರಿತು ಶಾಸನ ಸಭೆಯಗಳಲ್ಲಿ ಚರ್ಚೆ ನಡೆಯಬೇಕು ಎಂದು ಹಿರಿಯ ಪತ್ರಕರ್ತ ಜಿ.ಮುಮ್ತಾಜ್ ಅಲೀಮ್ ಹೇಳಿದರು.
ತಾಲೂಕಿನ ಹರವು ಗ್ರಾಮದಲ್ಲಿರುವ ಪ್ರಾಚೀನ ಸ್ಮಾರಕ ರಾಮದೇವರ ದೇಗುಲದ ಆವರಣದಲ್ಲಿ ಗ್ರಾಮ ಸಂಸ್ಕೃತಿ ಸಾಂಸ್ಕೃತಿಕ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ, ಹದಿನಾರನೇ ವರ್ಷದ ಕುಣಿಯೋಣ ಬಾರಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಬಾಲ ಕಾರ್ಮಿಕ ಪದ್ಧತಿ , ಬೀದಿ ಮಕ್ಕಳ ಮೇಲಿನ ದೌರ್ಜನ್ಯ, ಅದರಲ್ಲೂ ಹೆಣ್ಣು ಮಕ್ಕಳ ಮೇಲೆನ ಲೈಂಗಿಕ ದೌರ್ಜನ್ಯ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲಿನ ಅತ್ಯಾಚಾರ , ಸಮಾಜ ವಿರೋಧಿ ಶಕ್ತಿಗಳು ಮಕ್ಕಳನ್ನು ಭಿಕ್ಷಾಟನೆಗೆ ಹಚ್ಚುವುದು, ಮಕ್ಕಳ ಅಪಹರಣ, ಮಕ್ಕಳ ಆರೋಗ್ಯ ಸಮಸ್ಯೆ ಇತ್ಯಾದಿಗಳಿಂದ ಲಕ್ಷಾಂತರ ಮಕ್ಕಳು ರಾಷ್ಟ್ರದಲ್ಲಿ ಬಳಲುತ್ತಿದ್ದಾರೆ. ಇಂತಹ ವಿಚಾರಗಳನ್ನು ಅಸಕರು ಶಾಸನ ಸಭೆಗಳಲ್ಲಿ ಚರ್ಚೆಯನ್ನೇ ನಡೆಸುತ್ತಿಲ್ಲ ಎಂದು ವಿಷಾದಿಸಿದರು.


ಬಡತನ, ಅಪೌಷ್ಟಿಕತೆ, ಸ್ವಚ್ಛತೆಯ ಕೊರತೆಗಳಿಂದಲೂ ಮಕ್ಕಳು ಸಾವು, ನೋವುಗಳು ನಡೆಯುತ್ತವೆ, ಮಕ್ಕಳು ಸೇರಿದಂತೆ ದೇಶದ ಪ್ರತಿ ನಾಗರಿಕನಿಗೂ ಸಂವಿಧಾನ ಕಾನೂನಿನ ರಕ್ಷಣೆಯನ್ನು ಖಾತರಿಪಡಿಸುತ್ತದೆ ಎಂದು ಹೇಳಿದರು.


ರಂಗಕರ್ಮಿ ಗಿರೀಶ್ ಮಾಚಳ್ಳಿ ಮಾತನಾಡಿ, ಬಾಲ್ಯದಲ್ಲೇ ತಮ್ಮ ಹಳ್ಳಿಯ ಒಡನಾಟ, ಮಣ್ಣಿನ ಗುಣ ಮೈಗೂಡಿಸಿಕೊಂಡು ರಂಗ ಭೂಮಿಗೆ ಬಂದವರೇ ನಿಜ ಕಲಾವಿದರಾಗಿ ರೂಪುಗೊಳ್ಳುತ್ತಾರೆ. ಇಂತಹ ಶಿಬಿರಗಳೇ ಮಕ್ಕಳ ಅಡಿಪಾಯ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಶಿಬಿರ ಆಯೋಜಿಸಿ ಮಕ್ಕಳ ಜ್ಞಾನ ಶಾಖೆಯನ್ನು ಬೆಳೆಸುತ್ತಿರುವ ಲೇಖಕ ಹರವುದೇವೇಗೌಡರ ನಿರಂತರ ಶ್ರಮ ಶ್ಲಾಘನೀಯ ಎಂದರು.


ಪಾಳು ಬಿದ್ದ ಶಿಥಿಲಾವಸ್ಥೆಗೆ ತಲುಪಿ, ಅನೈತಿಕ ಚಟುವಟಿಕೆಗಳ ತಾಣವಾಗಿದ್ದ ಈ ರಾಮದೇವರ ದೇಗುಲವನ್ನು ಮೂವತ್ತು ವರ್ಷಗಳಿಂದ ಜೀರ್ಣೋದ್ಧಾರ ಮಾಡಿಸಿ ಈ ಪರಿಸರವನ್ನು ರಂಗ ಚಟುವಟಿಕೆಗೆ ಬಳಸುತ್ತ ದೇಗುಲವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿರುವುದು ಈ ಸಮಾಜಕ್ಕೆ ಮಾದರಿ ಎಂದರು.
ಕಾರ್ಯಕ್ರಮದಲ್ಲಿ ಜಾನಪದ ನೃತ್ಯಗಳು, ಕಂಸಾಳೆ ಹಾಗೂ ನೀಲಿಮರ ಎಂಬ ಮಕ್ಕಳ ನಾಟಕವನ್ನು ಪ್ರದರ್ಶಿಸುವ ಮೂಲಕ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಲಾಶಕ್ತರನ್ನು ಮಕ್ಕಳು ರಂಜಿಸಿದರು. ಶಿಬಿರದ ವ್ಯವಸ್ಥಾಪಕಾರದ ಹರವು ದೇವೇಗೌಡ ಮಾತನಾಡಿದರು.


ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ನಾಗಲಿಂಗೇಗೌಡ, ಹರವು ಪ್ರಕಾಶ್, ಗೋವಿಂದರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net