

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಭ್ರಷ್ಟಾಚಾರ ರಹಿತ ಆಡಳಿತದ ಬಗ್ಗೆ ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರ, ರಾಜ್ಯದಲ್ಲಿ ಈಗ ಚರ್ಚೆಗೆ ಗ್ರಾಸವಾಗಿರುವ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಿ ಎಂದು ಸಂಸದ ಡಾ. ಕೆ.ಸುಧಾಕರ್ ಸವಾಲೆಸೆದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಅಹವಾಲು ಸ್ವೀಕರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಅಕ್ರಮದ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಮೇಲ್ನೋಟಕ್ಕೆ ಹಗರಣ ನಡೆದಿರುವ ಬಗ್ಗೆ ತಿಳಿದು ಬರುತ್ತಿದೆ. ಇದರ ನಡುವೆ ರಾಜ್ಯ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಪಕ್ಷದ ನಾಯಕರು ಹೋರಾಟ ನಡೆಸುತ್ತಿದ್ದಾರೆ. ಇದು ಸತ್ಯಾಂಶ ಹೊರ ಬರುವವರೆಗೂ ಮುಂದುವರಿಯಲಿದೆ ಎಂದರು.
ಮೊದಲಿನಿಂದಲೂ ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತದ ಬಗ್ಗೆ ಹೇಳಿಕೊಳ್ಳುವ ರಾಜ್ಯ ಸರ್ಕಾರ ಮುಡಾ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಿಬಿಐ ತನಿಖೆಗೆ ಒಪ್ಪಿಸಲಿ ಎಂದರು.
ವಾರಕ್ಕೊಮ್ಮೆ ಅಹವಾಲು ಸ್ವೀಕಾರ
ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕ್ಷೇತ್ರದಲ್ಲಿ ವಾರಕ್ಕೊಮ್ಮೆ ಜನರ ಸಮಸ್ಯೆಗಳನ್ನು ಆಲಿಸಲು, ಅಹವಾಲು ಸ್ವೀಕಾರ ಸಭೆಯನ್ನು ಕೈಗೊಳ್ಳಲಾಗುವುದು ಎಂದು ಡಾ.ಕೆ. ಸುಧಾಕರ್ ತಿಳಿಸಿದರು.
ಸಂಸತ್ತಿನ ಕಲಾಪದ ಅವಧಿಯನ್ನು ಹೊರತುಪಡಿಸಿದಂತೆ ಉಳಿದ ದಿನಗಳಲ್ಲಿ ವಾರಕ್ಕೊಮ್ಮೆ (ಪ್ರತಿ ಸೋಮವಾರ) ಅಹವಾಲು ಸ್ವೀಕಾರ ಸಭೆಯನ್ನು ನಡೆಸಲಾಗುವುದು ಎಂದರು.
ಮುಂಬರುವ ದಿನಗಳಲ್ಲಿ ಗೃಹ ಕಚೇರಿ ಮತ್ತು ಪಕ್ಷದ ಕಚೇರಿಯಲ್ಲಿ ಪದಾಧಿಕಾರಿಗಳು ಮತ್ತು ನಾಯಕರನ್ನು ನೇರವಾಗಿ ಭೇಟಿ ಮಾಡಿ, ಚರ್ಚಿಸಲು ಅವಕಾಶ ನೀಡಲಾಗುವುದು. ಹಾಗೆಯೇ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ಜನರ ಸಂಕಷ್ಟವನ್ನು ಆಲಿಸಲು ಸೀಮಿತಗೊಳಿಸಲಾಗುತ್ತದೆ ಎಂದರು.
ವರ್ಷದ ಬಳಿಕ ಉತ್ಸಾಹ ಪ್ರದರ್ಶನ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ 1 ವರ್ಷ ಅಧಿಕಾರವನ್ನು ಕಳೆದುಕೊಂಡಿದ್ದ ಸಂಸದರು, ಮತ್ತೆ ಹಿಂದಿನ ಶೈಲಿಯಲ್ಲಿ ಅಹವಾಲುಗಳನ್ನು ಸ್ವೀಕರಿಸಿದರು. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗುವ ಜತೆಗೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಸುಧಾಕರ್, ತಾಲೂಕು ಮತ್ತು ಜಿಲ್ಲಾಡಳಿತ ಭವನದಲ್ಲಿ ಅಹವಾಲು ಸಭೆಗಳನ್ನು ನಡೆಸುತ್ತಿದ್ದರು. ಇದರ ನಡುವೆ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಅಧಿಕಾರವಿಲ್ಲದೇ ಅಜ್ಞಾತವಾಸ ಅನುಭವಿಸಿದ್ದು ಇದನ್ನು ಬಹಿರಂಗವಾಗಿ ಕಣ್ಣೀರು ಸುರಿಸುವ ಮೂಲಕ ಹೇಳಿಕೊಂಡಿದ್ದರು. ಮತ್ತೆ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದು ಅಧಿಕಾರ ಮರಳಿ ಪಡೆದ ಖುಷಿಯನ್ನು ಅಹವಾಲು ಸ್ವೀಕಾರ ಸಭೆಯಲ್ಲಿ ವ್ಯಕ್ತಪಡಿಸಿದರು.
ವರ್ಷದಿಂದ ಅಭಿವೃದ್ಧ ಮಂದಗತಿ
ಕ್ಷೇತ್ರದಲ್ಲಿ ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿವೆ. ಇದಕ್ಕೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲಾಗುವುದು ಎಂದು ಸಂಸದ ಡಾ ಕೆ.ಸುಧಾಕರ್ ತಿಳಿಸಿದರು. ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸಾರ್ವಜನಿಕ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಒಂದು ವರ್ಷದಲ್ಲಿ ಅರ್ಹ ಲಾನುಭವಿಗಳಿಗೆ ಸವಲತ್ತುಗಳನ್ನು ಒದಗಿಸುವ ಮತ್ತು ಅರ್ಹ ಅರ್ಜಿಗಳನ್ನು ಇತ್ಯರ್ಥಪಡಿಸುವ ಕೆಲಸವಾಗಿಲ್ಲ. ಮುಂಬರುವ ದಿನಗಳಲ್ಲಿ ಜನರ ಸಂಕಷ್ಟವನ್ನು ಆಲಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಂತದಲ್ಲಿ ಬಗೆಹರಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲಾಗುವುದು ಎಂದರು.
ಅಧಿಕಾರಿಗಳಿಗೆ ತರಾಟೆ
ಹಲವು ವರ್ಷಗಳಿಂದಲೂ ಸಮಸ್ಯೆ ಬಗೆಹರಿಯದೆ ಅಲೆದಾಡುತ್ತಿರುವ ಬಗ್ಗೆ ಅರ್ಹ ಲಾನುಭವಿಗಳು ಸಂಸದರ ಬಳಿ ಅಳಲು ತೋಡಿಕೊಂಡರು. ಇದೇ ವೇಳೆ ಸಂಸದರು, ಸಕಾಲದಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಏಕೆ ಇತ್ಯರ್ಥಪಡಿಸಿಲ್ಲ ಎಂದು ಸ್ಥಳೀಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.