ಹೋರಾಟದ ತೀವ್ರತೆ ವಿಧಾನಸೌಧಕ್ಕೂ ಮುಟ್ಟಲಿ

3-byd3-sureshagoudra B patil X MLA
Published on

ಬ್ಯಾಡಗಿ: ಪಟ್ಟಣದ ಮುಖ್ಯರಸ್ತೆ ವಿಸ್ತರಣೆಗೆ ಆಗ್ರಹಿಸಿ ಜೂ.5ರಂದು ಕರೆ ನೀಡಿರುವ ಬ್ಯಾಡಗಿ ಬಂದ್ ಹೋರಾಟಕ್ಕೆ ಮೆಣಸಿನಕಾಯಿ ವರ್ತಕರ ಸಂಘ ಎಲ್ಲ ವಹಿವಾಟುಗಳನ್ನು ಸ್ಥಗಿತಗೊಳಿಸಿ ಬೆಂಬಲ ನೀಡಲಿದೆ ಎಂದು ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ತಿಳಿಸಿದ್ದಾರೆ.

ಇಲ್ಲಿನ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ವರ್ತಕರ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಏರ್ಪಡಿಸಿದ್ದ ಮಾರುಕಟ್ಟೆಯ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದರು. ಬ್ಯಾಡಗಿ-ಗಜೇಂದ್ರಗಡ-ಸೊರಬ ಮುಖ್ಯರಸ್ತೆಯ ಕಾಮಗಾರಿ ಚಾಲನೆ ನೀಡಲು ತಾವು ಶಾಸಕರಾಗಿದ್ದ ಅವಧಿಯಲ್ಲಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಆಗ ಮಾಲೀಕರು ಒಪ್ಪಿ ಸಹಕಾರ ನೀಡಿದ್ದರು. ಕೆಲವರು ಸ್ವಾರ್ಥದಿಂದ ಕಾಮಗಾರಿಗೆ ಹಿನ್ನ್ನಡೆಯಾಗಿದೆ. ಬಳಿಕ ಕೆಲವರು ನ್ಯಾಯಾಲಯ ಮೊರೆ ಹೋದ ಪರಿಣಾಮ ಈವರೆಗೂ ವಿಸ್ತರಣೆ ನನೆಗುದಿಗೆ ಬಿದ್ದಿದೆ. ರಸ್ತೆ ವಿಸ್ತರಣೆ ತೀವ್ರ ಅಗತ್ಯವಾಗಿದ್ದು, ಪ್ರತಿಭಟನೆಯಲ್ಲಿ ಮಾರುಕಟ್ಟೆಯಿಂದ 2 ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳಲಿದ್ದಾರೆ. ಹೋರಾಟದ ತೀವ್ರತೆ ವಿಧಾನಸೌಧಕ್ಕೂ ಮುಟ್ಟಬೇಕು. ಸರ್ಕಾರ ವಾಸ್ತವ ಸಮಸ್ಯೆ ಅರಿತು ಸ್ಥಳೀಯರಿಗೆ ನ್ಯಾಯ ಒದಗಿಸಲು ಮುಂದಾಗಲಿ ಎಂದು ಆಗ್ರಹಿಸಿದರು.

ಅಗಲೀಕರಣ ಹೋರಾಟ ಸಮಿತಿ ಗೌರವಾಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ಬಿಜೆಪಿ, ಕಾಂಗ್ರೆಸ್ ಎನ್ನದೆ ಎಲ್ಲರೂ ಬೆಂಬಲಕ್ಕೆ ನಿಂತಿದ್ದಾರೆ. ಅನಿರ್ದಿಷ್ಟಾವಧಿ ಚಳವಳಿ ನಡೆಯಲಿದ್ದು, ಪ್ರತಿದಿನ ಒಂದೊಂದು ಸಂಘಟನೆಗಳು ಜವಾಬ್ದಾರಿ ಹೊರಲಿವೆ. ರಾಜೀಯಂತಹ ಹೊಸ ನಾಟಕಗಳಿಗೆ ನಾವು ಆದ್ಯತೆ ನೀಡುವುದಿಲ್ಲ, ಈಗೇನಿದ್ದರೂ ರಸ್ತೆ ಕಾಮಗಾರಿಗೆ ಚಾಲನೆ ಸಿಗಬೇಕು. ಸರ್ಕಾರ ಅಧಿಕೃತ ಆದೇಶ ಹೊರಡಿಸುವರೆಗೂ ಹೋರಾಟ ಕೈಬಿಡುವ ಪ್ರಶ್ನೆಯಿಲ್ಲ. ಎಪಿಎಂಸಿ ಗೇಟ್ ಹಾಗೂ ಪಾಂಡುರಂಗ ಟಾಕೀಸ್ ಬಳಿ ಗುಂಡಿ ತೆಗೆದು ಹೋರಾಟ ನಡೆಸುತ್ತೇವೆ. ಗಜಾನನ ಬ್ಯಾಂಕ ಎದುರು ರಸ್ತೆಗೆ ಅಡ್ಡಲಾಗಿ ಶಾಮಿಯಾನ ಹಾಕಲಾಗುವುದು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ಮೆಣಸಿನಕಾಯಿ ವರ್ತಕರ ಸಂಘದ ಕಾರ್ಯದರ್ಶಿ ರಾಜು ಮೋರಗೇರಿ, ಸುರೇಶ ಚಲವಾದಿ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮುಕ್ತಿಯಾರ್ ಮುಲ್ಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net