

ಶಿವಮೊಗ್ಗ: ನಗರಗಳನ್ನು ಶುಚಿಗೊಳಿಸಿ ನಮ್ಮ ಬದುಕನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರು, ಆಹಾರ ಉತ್ಪಾದಿಸುವ ಕೃಷಿ ಕೂಲಿಕಾರರು, ಅಂದಗಾಣಿಸುವಂತಹ ಉಡುಪುಗಳನ್ನು ತಯಾರಿಸುವ ಗಾರ್ಮೆಂಟ್ಸ್ ನೌಕರರಂತಹ ಹಲವು ಅಸಂಘಟಿತ, ಅದೃಶ್ಯ ಕಾರ್ಮಿಕರ ಬದುಕಿನ ಕಡೆಗೆ ನಮ್ಮ ಸಮಾಜದಲ್ಲಿರುವ ನಿರ್ಲಕ್ಷ್ಯ ಮತ್ತು ಸಂವೇದನಾರಹಿತ ಮನಸ್ಥಿತಿ ಬದಲಾಗಬೇಕು ಎಂದು ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ಕೆ.ರವಿ ಅಭಿಪ್ರಾಯಪಟ್ಟರು.
ಕಾರ್ಮಿಕರ ಬದುಕಿನ ಕಡೆಗೆ ಸಂವೇದನಾರಹಿತ ಮನಸ್ಥಿತಿ ಬದಲಾಗಲಿಕುವೆಂಪು ವಿವಿಯ ಪ್ರೊ. ಎಸ್.ಪಿ.ಹಿರೇಮಠ ಸಭಾಂಗಣದಲ್ಲಿ ಗುರುವಾರ ವಿವಿಯ ಡಾ. ಬಾಬುಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಸಮಾಜಕಾರ್ಯ ವಿಭಾಗದಿಂದ ಡಾ. ಬಾಬು ಜಗಜೀವನ್ ರಾಮ್ ಅವರ 115ನೇ ಜನ್ಮದಿನಾಚರಣೆ ನಿಮಿತ್ತ ಅಸಂಘಟಿತ ವಲಯದ ಕಾರ್ಮಿಕರು ಎದುರಿಸುತ್ತಿರುವ ಸವಾಲುಗಳು ಮತ್ತು ಬಲವರ್ಧನೆಗೆ ಮಾರ್ಗಗಳು ಕುರಿತ ಎರಡು ದಿನಗಳ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಬದುಕಿನ ಮೂಲ ಅವಶ್ಯಕತೆಗಳಾದ ಆಹಾರ, ಆರೋಗ್ಯ, ಸ್ವಚ್ಛತೆ, ಸೂರುಗಳನ್ನು ನಿರ್ಮಿಸಲು ಶ್ರಮಿಸುವ ಲಕ್ಷಾಂತರ ಕಾರ್ಮಿಕರು ಸ್ವತಃ ಮೂಲ ಸೌಕರ್ಯಗಳಿಲ್ಲದೇ ನರಳಾಟದ ಬದುಕು ನಡೆಸುತ್ತಿರುವುದನ್ನು ನೋಡದೇ ವ್ಯವಸ್ಥೆ ನಿರ್ಲಕ್ಷಿಸುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಪೌರಕಾರ್ಮಿಕರು, ಕಟ್ಟಡ ಕಾರ್ಮಿಕರು, ರೈತರು, ಪೆಟ್ರೋಲ್ ಬಂಕ್ ನೌಕರರು, ಡೆಲಿವರಿ ಬಾಯ್‌ಗಳ ವೃತ್ತಿಗಳನ್ನು ಅಪಾರ ಘನತೆಯಿಂದ ನೋಡಲಾಗುತ್ತದೆ. ಭಾರತದಲ್ಲಿರುವ ಸಂವೇದನಾರಹಿತ ಮನಸ್ಥಿತಿಯನ್ನು ಸರಿಪಡಿಸಲು ಕೇವಲ ನೆಪಮಾತ್ರದ ಯೋಜನೆಗಳ ಬದಲಾಗಿ ಸಮಾಜದಲ್ಲಿ ಪ್ರತಿಯೊಬ್ಬರ ದೃಷ್ಟಿಕೋನದಲ್ಲಿ, ಅಂತಃಕರಣದಲ್ಲಿ ಬದಲಾವಣೆ ಆಗಬೇಕಿದೆ ಎಂದರು.
ಮಾಧ್ಯಮಗಳಲ್ಲಿ ಅಸಂಘಟಿತ ಕಾರ್ಮಿಕರ ಚಿತ್ರಣ ವಿಷಯದ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಗೋಪಾಲ್ ಎಸ್.ಯಡಗೆರೆ, ಪತ್ರಿಕೋದ್ಯಮದಲ್ಲಿರುವ ಸಾಮಾಜಿಕ ಜವಾಬ್ದಾರಿಯನ್ನು ಮಾನವೀಯ ಅಂತಃಕರಣದೊಂದಿಗೆ ಬಳಸಿದಲ್ಲಿ ಅಸಂಘಟಿತ ವಲಯದ ಕಾರ್ಮಿಕರ ನೋವುಗಳಿಗೆ, ಸಮಸ್ಯೆಗಳಿಗೆ ದಕ್ಷ ದನಿಯಾಗಬಹುದು, ಸುಧಾರಣೆ ತರಬಹುದು. ರಾಜಕೀಯ, ಅಪರಾಧ ವರದಿಗಳಿಗಿಂತ ಒಳಿತನ್ನು ಗುರುತಿಸುವ, ಶೋಷಿತರಲ್ಲಿರುವ ಪ್ರತಿಭೆಗಳು, ಅವರ ಸಂಕಟ-ಅವಶ್ಯಕತೆಗಳ ಕುರಿತು ದನಿಯಾಗಿ ಜನರಲ್ಲಿ ಉತ್ತಮ ಸಂವೇದನೆಯನ್ನು ಮೂಡಿಸಬಹುದು. ಟಿಆರ್‌ಪಿ ಬದಲಾಗಿ ಜನರ ಒಳಿತಿಗಾಗಿ ಕೆಲಸ ಮಾಡುವಂತಹ ಮಾಧ್ಯಮಗಳನ್ನು, ಪತ್ರಕರ್ತರನ್ನು ಜನರು ಬೆಂಬಲಿಸಬೇಕು ಎಂದರು.
ವಿವಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ, ಕುಲಸಚಿವೆ ಪ್ರೊ. ಸಿ.ಗೀತಾ, ಡಾ. ಬಾಬುಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಎಂ.ಆರ್.ಸತ್ಯಪ್ರಕಾಶ್, ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ. ಜಿ.ಪ್ರಶಾಂತ್ ನಾಯಕ್ ಮಾತನಾಡಿದರು. ವಿವಿಧ ವಿಶ್ವವಿದ್ಯಾಲಯಗಳಿಂದ ಸಂಶೋಧನಾ ಪತ್ರಿಕೆಗಳನ್ನು ಪ್ರಸ್ತುತ ಪಡಿಸಲು ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾರ್ಥಿಗಳು ಆಗಮಿಸಿದ್ದರು. ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳು ಹಾಜರಿದ್ದರು.