ಸೋಂಕಿತರನ್ನು ಸಮಾನವಾಗಿ ಕಾಣಲಿ

ಸೋಂಕಿತರನ್ನು ಸಮಾನವಾಗಿ ಕಾಣಲಿ
Published on

ಬೇಲೂರು: ಎಚ್‌ಐವಿ ಸೋಂಕಿತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಸೋಂಕು ಇತರರಿಗೆ ಹರಡದಂತೆ ತಡೆಯಲು ಜನಜಾಗೃತಿ ಮೂಡಿಸುವುದು ಅಗತ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಇಲಾಖೆ, ಪುರಸಭೆ, ಲಯನ್ಸ್ ಮತ್ತು ರೋಟರಿ ಸಂಸ್ಥೆ ಸಹಯೋಗದಲ್ಲಿ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದ ಡಾ.ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಏಡ್ಸ್ ಜಾಗೃತಿ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು .

ಸಮಾಜದಲ್ಲಿ ಸೋಂಕಿತರು ಸೇರಿದಂತೆ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಎಚ್‌ಐವಿ ಸೋಂಕಿತರನ್ನು ಸಮಾನತೆಯಿಂದ ನೋಡಿ ಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಎಚ್‌ಐವಿ ಇತರರಿಗೆ ಹರಡದಂತೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಯೊಂದಿಗೆ ಸಮನ್ವಯ ಸಾಧಿಸಿ, ಸಹಕಾರ ಪಡೆದು ಸೋಂಕು ತಡೆಗೆ ಮುಂದಾಗಬೇಕಿದೆ. ವಿಶ್ವದಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಹೆಚ್ಚಿರುವ ದೇಶಗಳಲ್ಲಿ ಭಾರತ 3 ನೇ ಸ್ಥಾನದಲ್ಲಿದೆ. ಸೋಂಕಿನ ಬಗ್ಗೆ ಅರಿವು ಮೂಡಿಸಲು ವಿಶ್ವ ಏಡ್ಸ್ ದಿನಾಚರಣೆಯನ್ನು 1988 ರಿಂದ ಸತತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಏಡ್ಸ್ ದಿನದ ಮಹತ್ವವನ್ನು ಪ್ರತಿಯೊಬ್ಬರು ಅರಿತು ಸ್ವಯಂ ಪ್ರೇರಿತವಾಗಿ ಜಾಗೃತಿ ಹೊಂದುವ ಮೂಲಕ ಎಚ್‌ಐವಿ ಮುಕ್ತ ಭಾರತ ಮಾಡಬೇಕು ಎಂದರು.

ಡಾಪ್ಕೋ ಜಿಲ್ಲಾ ಮೇಲ್ವಿಚಾರಕ ಬಿ.ಎಂ.ರವಿಕುಮಾರ್ ಮಾತನಾಡಿ, 1983ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಸೋಂಕು ಕಂಡು ಬಂತು. ಅಸುರಕ್ಷಿತ ಲೈಂಗಿಕತೆ, ಸಂಸ್ಕರಿಸದ ಸೂಜಿಯಿಂದ, ತಾಯಿಯಿಂದ ಮಗುವಿಗೆ, ಪರೀಕ್ಷೆ ಮಾಡಿಸಿಲ್ಲದ ರಕ್ತದಾನಿಗಳಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಎಚ್‌ಐವಿ ಸೋಂಕು ತಡೆಯಲು ಎಲ್ಲರೂ ದೃಢ ಸಂಕಲ್ಪ ಮಾಡಬೇಕು. ಈ ವರ್ಷದ ವಿಶ್ವ ಏಡ್ಸ್ ದಿನಾಚರಣೆಯ ದ್ಯೇಯ ವಾಕ್ಯವಾದ ಸೊನ್ನೆಗೆ ತನ್ನಿ ಎಂಬುದಾಗಿದೆ. ಇದು ಯಶಸ್ವಿಯಾಗಬೇಕಾದರೆ 18 ರಿಂದ 35 ವರ್ಷದೊಳಗಿನ ಯುವಕರ ಪಾತ್ರ ಮಹತ್ವದ್ದಾಗಿದ್ದು, ಈ ನಿಟ್ಟಿನಲಿ ಎಚ್‌ಐವಿ ಸೋಂಕಿನ ಬಗ್ಗೆ ಯುವ ಸಮೂಹಕ್ಕೆ ಅರಿವು ಮೂಡಿಸಬೇಕಿದೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2030ರೊಳಗೆ ಎಚ್‌ಐವಿ, ಏಡ್ಸ್ ಮುಕ್ತ ಭಾರತಕ್ಕೆ ಸಂಕಲ್ಪ ಮಾಡಬೇಕು ಎಂದಿದ್ದಾರೆ. ಜತೆಗೆ ಎಚ್‌ಐವಿ ಸೋಂಕಿತರಲ್ಲಿ ಭಾತರ 3ನೇ ಸ್ಥಾನದಲ್ಲಿರುವುದು ಶೋಚನೀಯ ಸಂಗತಿಯಾಗಿದೆ. ನನ್ನಿಂದಲೇ ಸಮಾಜದ ಬದಲಾವಣೆಗೆ ಮುಂದಾಗಬೇಕಿದೆ ಎಂಬ ಸಂಕಲ್ಪ ಮಾಡಬೇಕು. ಕೇವಲ ಜಾಥ ನಡೆಸಿದರೆ ಸಾಲದು ಜಾಗೃತಿ ಅಗತ್ಯವಿದೆ ಎಂದರು.

ಪುರಸಭೆ ಉಪಾಧ್ಯಕ್ಷ ಉಷಾ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಚಂದ್ರಮೌಳಿ, ರೋಟರಿ ಕ್ಲಬ್ ಅಧ್ಯಕ್ಷ ಶಂಭುಗೌಡ, ಮಾಜಿ ಅಧ್ಯಕ್ಷ ವೈ.ಬಿ.ಸುರೇಶಗೌಡ, ರೋಟರಿ ಕ್ಲಬ್ ಪದಾಧಿಕಾರಿಗಳಾದ ರಮೇಶ್, ಕಸಾಪ ಮಾಜಿ ಅಧ್ಯಕ್ಷ ಬಿ.ಎಲ್.ರಾಜೇಗೌಡ, ಆರೋಗ್ಯ ಶಿಕ್ಷಣಾಧಿಕಾರಿ ಉಷಾ, ಹಿರಿಯ ಸುರಕ್ಷತಾಧಿಕಾರಿ ಮಂಗಳಮ್ಮ, ಅಪ್ತ ಸಮಾಲೋಚಕ ಧರಣೇಶ್, ಐಸಿಟಿಸಿ ಪ್ರಯೋಗ ತಜ್ಞ ರೇಣುಕಾ ಪ್ರಸಾದ್, ಆರೋಗ್ಯಾಧಿಕಾರಿ ದಯಾನಂದ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net