ಪಿಒಪಿ ಮೂರ್ತಿ ಸಂಪೂರ್ಣ ನಿಷೇಧವಾಗಲಿ

26 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಗಣೇಶ ಚರ್ತುಥಿ ಸಮಯದಲ್ಲಿ ಪ್ಲಾಸ್ಟರ್​ ಆಫ್ ​ಪ್ಯಾರಿಸ್​ (ಪಿಒಪಿ) ಮೂರ್ತಿಗಳ ತಯಾರಿಕೆ, ಮಾರಾಟವನ್ನು ಸಂಪೂರ್ಣ ನಿಷೇಧಿಸಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕ ಗಣೇಶೋತ್ಸವ ಮಹಾ ಮಂಡಳ ಕಾರ್ಯಾಧ್ಯಕ್ಪ ವಸಂತ ಅರ್ಕಾಚಾರ ಆಗ್ರಹಿಸಿದರು.
ನಗರದ ಕಾಮನಕಟ್ಟಿ ಮೌನೇಶ್ವರ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕರ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.
ಗಣೇಶ ಚತುರ್ಥಿಗೆ ಈಗಾಗಲೇ ಹೊರ ರಾಜ್ಯದಿಂದ ಪಿಒಪಿ ಗಣೇಶ ವಿಗ್ರಹಗಳು ನಗರಕ್ಕೆ ಆಗಮಿಸಿವೆ. ಅವುಗಳನ್ನು ಸಂಪೂರ್ಣ ನಿಷೇಧಿಸಬೇಕು. ಸ್ಥಳಿಯವಾಗಿ ಮಣ್ಣಿನ ಗಣೇಶ ವಿಗ್ರಹ ತಯಾರಿಸುವ ಕಲಾವಿದರಿಗೆ ಬಹಳ ತೊಂದರೆಯಾಗಿದೆ. ಈ ಕುರಿತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಕ್ರಮವಾಗಿಲ್ಲ. ಹೀಗಾಗಿ ಜಿಲ್ಲಾಡಳಿತ, ಪರಿಸರ ಮಾಲಿನ್ಯ ಸಮಿತಿ, ಮಹಾನಗರ ಪಾಲಿಕೆ, ಹೆಸ್ಕಾಂ ಮತ್ತು ಪೊಲೀಸ್​ ಇಲಾಖೆ ಸಭೆ ನಡೆಸಿ, ಪಿಒಪಿ ಗಣೇಶ ವಿಗ್ರಹ ನಿಷೇಧಿಸಿ ಮಣ್ಣಿನ ಮೂರ್ತಿಗೆ ಪ್ರಾಧಾನ್ಯತೆ ನೀಡಲು ಕ್ರಮ ವಹಿಸಬೇಕು ಎಂದರು.
ಪ್ರಕಾಶ ಬಡಿಗೇರ ಮಾತನಾಡಿ, ಗಣೇಶ ಚತುರ್ಥಿ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಪಿಒಪಿ ಗಣೇಶ ವಿಗ್ರಹ ಮಾರಾಟಕ್ಕೆ ಅವಕಾಶ ಕಲ್ಪಿಸಬಾರದು ಎಂದು ಮನವಿ ಮಾಡಿದರು.
ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ದಿನೇಶ ನಾಯ್ಕ ಮಾತನಾಡಿ, ಈಗಾಗಲೇ ಸರ್ಕಾರ ಪಿಒಪಿ ವಿಗ್ರಹ ತಡೆಗೆ ರೂಪುರೇಷೆ ತಯಾರಿಸಿದೆ. ಮಾರಾಟ ಮತ್ತು ತಯಾರಿಕೆ ಕಾನೂನು ರೀತಿ ಅಪರಾಧ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಅಧ್ಯತೆಯಲ್ಲಿ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಾನಗರ ಪಾಲಿಕೆ ಪರಿಸರ ಅಭಿಯಂತರ ನಯನ ಕೆ.ಎಸ್​ ಮಾತನಾಡಿ, ಪಿಒಪಿ ವಿಗ್ರಹ ಮಾರಾಟಗಾರ ಮಾಹಿತಿ ಲಭ್ಯವಾದ ಕೂಡಲೇ ಪಾಲಿಕೆಯ ವ್ಯಾಪ್ತಿಯಲ್ಲಿ ಮಾರಾಟ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸರೋಜ ಪೂಜಾರ, ಮುತ್ತಣ್ಣ ಭರಡಿ ಮಾತನಾಡಿದರು. ಪಾಲಿಕೆ ಸದಸ್ಯ ಶಂಕರ ಶೇಳಕೆ, ವಿಠ್ಠಲ ಕೊಪ್ಪದ, ಹಿರಿಯ ಕಲಾವಿದ ಕಾಳಪ್ಪ ಬಡಿಗೇರ, ಇತರರು ಇದ್ದರು. ರವಿ ಚಿತ್ರಗಾರ ಸ್ವಾಗತಿಸಿದರು. ಮಂಜು ಬಡಿಗೇರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net