

ಮೈಸೂರು: ದಿವ್ಯ ಚೇತನರಾದ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು ಪದವಿ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದು ಸಾಹಿತಿ, ನಾಡೋಜ ಡಾ.ಹಂಪ ನಾಗರಾಜಯ್ಯ ಸಲಹೆ ನೀಡಿದರು.
ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್‌ನ 9ನೇ ವಾರ್ಷಿಕ ಸಮ್ಮೇಳನದಲ್ಲಿ ‘ರಾಮಕೃಷ್ಣ-ವಿವೇಕಾನಂದ ಭಾವಧಾರೆಯ ಔಚಿತ್ಯ’ ಕುರಿತು ಉಪನ್ಯಾಸ ನೀಡಿದರು.
ಈ ದಾರ್ಶನಿಕದ್ವಯರ ವಿಚಾರವನ್ನು ಕಡ್ಡಾಯವಾಗಿ ಪದವಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕು. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ ಎಂದರು.
ಪರಮಹಂಸರು ಮೇಲು ಪರ್ವ, ಅವರು ಧಾರ್ಮಿಕ ಅಭಿಯಾನ ಮಾಡಲಿಲ್ಲ. ಸಿಂಹ ಗರ್ಜನೆಯನ್ನೂ ಹಾಕಲಿಲ್ಲ. ಬದಲಿಗೆ ಸ್ವಾಮಿ ವಿವೇಕಾನಂದರು, ಕುವೆಂಪು ಅವರಂತಹ ಶಿಷ್ಯರತ್ನಗಳನ್ನು ರೂಪಿಸಿಕೊಟ್ಟರು. ಅವರು ನೆಟ್ಟ ಬೀಜಗಳು ವಿಶ್ವವಾಣಿ, ದಿವ್ಯವಾಣಿಯಾಗಿ ಕಣ್ತೆರೆದವು. ಆ ಮೂಲಕ ದೇಶದಲ್ಲಿ ವಿಚಾರ ಕ್ರಾಂತಿಯನ್ನು ಉದ್ದೀಪನಗೊಳಿಸಿದರು ಎಂದು ಬಣ್ಣಿಸಿದರು.
ಪರಮಹಂಸರು ತೋರಿದ ದಾರಿಯಲ್ಲಿ ಸಾಗಿದವರು ಕುವೆಂಪು. ಅವರೂ ಮಡದಿಯಲ್ಲಿ ದೇವಿಯನ್ನು ಕಂಡವರು, ಅವರನ್ನು ಹೆಚ್ಚು ಗೌರವಿಸಿದವರು. ಅಷ್ಟೇ ಅಲ್ಲ, ಕುವೆಂಪು ಬರವಣಿಗೆಯಲ್ಲೂ ಪರಮಹಂಸರ ಪ್ರಭಾವ ಗೋಚರವಾಗುತ್ತದೆ. ಅವರ ಕಥೆ, ಕಾದಂಬರಿ, ಮಹಾಕಾವ್ಯದಲ್ಲೂ ಪರಮಹಂಸರ, ಸ್ವಾಮಿ ವಿವೇಕಾನಂದರ ವಿಚಾರಧಾರೆ ವ್ಯಕ್ತವಾಗುತ್ತದೆ. ಅಷ್ಟರ ಮಟ್ಟಿಗೆ ಕುವೆಂಪು ಜೀವನವನ್ನು ಅವರಿಬ್ಬರು ಆವರಿಸಿಕೊಂಡಿದ್ದರು ಎಂದರು.
ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಕುರಿತು ಕುವೆಂಪು ಅವರು ಬರೆದಿರುವ ಪುಸ್ತಕವನ್ನು ಕಡ್ಡಾಯವಾಗಿ ಓದಬೇಕು ಎಂದು ಹಂಪನಾ ಸಲಹೆ ನೀಡಿದರು.
ಮತೀಯ ಮೌಢ್ಯವನ್ನು ದೂರ ಮಾಡಿ ವೈಚಾರಿಕತೆ, ವೈಜ್ಞಾನಿಕತೆ, ಆಧ್ಯಾತ್ಮಿಕತೆಯನ್ನು ಜನಸಮುದಾಯದಲ್ಲಿ ಬಿತ್ತುವುದು ಕುವೆಂಪು ಅವರ ಆಶಯವಾಗಿತ್ತು. ಈ ನಿಟ್ಟಿನಲ್ಲೇ ಅವರು ಸಾಹಿತ್ಯ ಕೃಷಿ ಮಾಡಿದ್ದರು. ತಮ್ಮೂರಿನ ಹಿಂದುಳಿದ ಮಕ್ಕಳನ್ನು ರಾಮಕೃಷ್ಣ ಆಶ್ರಮದ ಶಾಲೆಗೆ ಸೇರಿಸುವ ಮೂಲಕ ತಳಸಮುದಾಯದ ಪುನರುಜ್ಜೀವನಕ್ಕೆ ಪ್ರಯತ್ನಿಸಿದ್ದರು ಎಂದು ಸ್ಮರಿಸಿದರು.
‘ಋಷಿ ಸಂಸ್ಕೃತಿಯ ಪುನರುತ್ಥಾನ ಮತ್ತು ಧರ್ಮ ಜಾಗೃತಿ’ ಕುರಿತು ಉಪನ್ಯಾಸ ನೀಡಿದ ಬೆಂಗಳೂರು ಬಸವನಗುಡಿಯ ರಾಮಕೃಷ್ಣಮಠದ ಸ್ವಾಮಿ ವೀರೇಶಾನಂದಜೀ ಮಹಾರಾಜ್ ಅವರು, ದೇಶದಲ್ಲಿ ಧರ್ಮಜಾಗೃತಿ ಆಗಬೇಕಿದೆ. ಧರ್ಮದ ಕುರಿತು ಅರಿವು ಮೂಡಿಸಲು ಪ್ರತಿಭಟನೆ, ಕೂಗಾಟ, ಸಂಘರ್ಷ, ಹಿಂಸೆ, ರಕ್ತಪಾತ ಮಾಡುವುದಲ್ಲ. ಧರ್ಮದ ಆದರ್ಶವನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಸಾಗುವುದು, ಅದುವೇ ನಿಜವಾದ ಧರ್ಮಜಾಗೃತಿ ಎಂದರು.
ಧಾರ್ಮಿಕತೆ ಭಾರತದ ಜೀವಾಳ. ಋಷಿ ಸಂಸ್ಕೃತಿ, ಭಾರತೀಯ ಸಂಸ್ಕೃತಿ, ದೈವಿಕ ಸಂಸ್ಕೃತಿ ಬೇರೆ ಬೇರೆ ಅಲ್ಲ. ಇದುವೇ ಧರ್ಮ ಜಾಗೃತಿ. ಅಭ್ಯುದಯ, ಸಂಸ್ಕಾರ ನೀಡುವುದೇ ಧರ್ಮ ಎಂದು ತಿಳಿಸಿದರು.
ಕೊಳೆತ, ಸಂಕುಚಿತಗೊಂಡಿದ್ದ ಹಿಂದು ಧರ್ಮವನ್ನು ರಾಮಕೃಷ್ಣ ಪರಮಹಂಸರು ಪರಿಶುದ್ಧಗೊಳಿಸಿದರು. ಪರಿಶುದ್ಧೀಕರಣ ಕಾರ್ಯವನ್ನು ಸ್ವಾಮಿವಿವೇಕಾನಂದರು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದರು. ಈ ದಾರ್ಶನಿಕದ್ವಯರ ವಿಚಾರ-ಆದರ್ಶವೇ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರ ಭಾವಧಾರೆ-ವಿಚಾರಧಾರೆ ಎಂದು ಅಥೈಸಿದರು.
ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ನಿತ್ಯಾಸ್ಥಾನಂದಜೀ ಮಹಾರಾಜ್ ಅವರು ‘ಶ್ರೀರಾಮಕೃಷ್ಣರ ಅವತರಣದ ಉದ್ದೇಶ ಮತ್ತು ವ್ಯಾಪ್ತಿ’ ಕುರಿತು ಉಪನ್ಯಾಸ ನೀಡಿದರು. ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಇದ್ದರು.