

ಗೋಣಿಕೊಪ್ಪ: ಜಿಲ್ಲೆಯಲ್ಲಿರುವ ಬಡವರಿಗೆ ನಿವೇಶನಕ್ಕೆ ಜಾಗ ನೀಡಬೇಕು. ವಸತಿರಹಿತರ ನೋಂದಣಿ ಕಾರ್ಯ ಸ್ಥಗಿತಗೊಂಡಿದ್ದು, ಅದು ಮರು ಆರಂಭ ಮಾಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.
ನಗರದ ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ಜಾಥಾ ಮೂಲಕ ತೆರಳಿದ ನಿವೇಶನ ರಹಿತರು, ಕಮ್ಯುನಿಸ್ಟ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು, ಬಳಿಕ ತಾಪಂ ಕಚೇರಿ ಎದುರು ಧರಣಿ ನಡೆಸಿದರು.
ಪಕ್ಷದ ರಾಜ್ಯ ಸಹ ಕಾರ್ಯದರ್ಶಿ ಬಿ.ಅಮ್ಜದ್ ಮಾತನಾಡಿ, 50 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನ ಒದಗಿಸುವಂತೆ ಪಕ್ಷದ ವತಿಯಿಂದ ರಾಜ್ಯವ್ಯಾಪಿ ಹೋರಾಟ ನಡೆಸಲಾಗುತ್ತಿದೆ. ಗುಡಿಸಲು ಮುಕ್ತ ಎಂದು ರಾಜ್ಯ ಸರ್ಕಾರ ಹೇಳಿಕೊಳ್ಳುತ್ತಿದೆ. ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಒತ್ತುವರಿದಾರರಿಗೆ ಭೋಗ್ಯಕ್ಕೆ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು ಸರ್ಕಾರ ಬಡವ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಪಕ್ಷದ ರಾಜ್ಯ ಸಮಿತಿ ಸದಸ್ಯ ಸಂತೋಷ್ ಮಾತನಾಡಿ, ಅಧಿಕಾರಿಗಳು ಬಡವರ ಅರ್ಜಿಗಳನ್ನು ವಿಲೇವಾರಿ ಮಾಡದೆ ದಿನ ದೂಡುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲಿ ನಿವೇಶನ ರಹಿತರ ನೋಂದಣಿ ಕಾರ್ಯ ಸ್ಥಗಿತಗೊಂಡಿದ್ದು ಅದನ್ನು ಮರು ಆರಂಭಿಸಬೇಕು ಹಾಗೂ ನೋಂದಾಯಿಸಿದ ಫಲಾನುಭವಿಗಳ ವಿವರಗಳನ್ನು ಬಹಿರಂಗಪಡಿಸಬೇಕು ಎಂದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸುನಿಲ್ ಮಾತನಾಡಿ, ನಿವೇಶಕ್ಕಾಗಿ 4 ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ತಾಲೂಕಿನಲ್ಲಿ 4 ಸಾವಿರ ಕುಟುಂಬಗಳಿಗೆ ತಲೆ ಮೇಲೊಂದು ಸೂರು ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಲೈನ್‌ಮನೆ, ಬಾಡಿಗೆ ಮನೆ, ನದಿ ತೀರದ ಸಂತ್ರಸ್ತರಿಗೆ ಸೂರು ಕೊಡಿಸಲು ಹೋರಾಟ ನಡೆಸಲಾಗುತ್ತಿದೆ ಎಂದರು.
ಪಕ್ಷದ ಸಹಕಾರ್ಯದರ್ಶಿ ರಫೀಕ್, ಅಖಿಲ ಭಾರತ ದಲಿತ ಆಂದೋಲನದ ರಾಜ್ಯ ಮಂಡಳಿ ಸದಸ್ಯ ರಮೇಶ್, ಪೊನ್ನಂಪೇಟೆ ತಾಲೂಕು ಕಾರ್ಯದರ್ಶಿ ಶಾಂತಿ, ಸೋಮವಾರ ಪೇಟೆ ತಾಲೂಕು ಕಾರ್ಯದರ್ಶಿ ಶಭಾನ, ಕಟ್ಟಡ ಕಾರ್ಮಿಕರ ಜಿಲ್ಲಾ ಕಾರ್ಯದರ್ಶಿ ಎಂ.ಎ ಕೃಷ್ಣ, ಮಂಜುಳಾ, ಬಾಬು ಆಂಟೋನಿ, ಶಾಜಿ, ಸೆಬಾಸ್ಟಿಯನ್ ಹಾಜರಿದ್ದರು. ಬಳಿಕ ತಾಲೂಕು ಪಂಚಾಯಿತಿ ವ್ಯವಸ್ಥಾಪಕಿ ಸ್ವರೂಪ ಅವರಿಗೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು.