

ನಾಗರಮುನ್ನೋಳಿ: ಸಮೀಪದ ಹಿರೇಕೋಡಿ ಗ್ರಾಮದ ಹೊರವಲಯದಲ್ಲಿರುವ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆಯಲ್ಲಿ ಈಚೆಗೆ ಕಲುಷಿತ ಆಹಾರ ಸೇವಿಸಿ ೧೨೦ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಪ್ರಕರಣದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಪಾಲಕರು ಪ್ರಭಾರ ಪ್ರಾಂಶುಪಾಲರಿಗೆ ಈಚೆಗೆ ಮನವಿ ಸಲ್ಲಿಸಿದರು.
ಶಾಲೆಯ ವಾರ್ಡನ್ ಹಾಗೂ ಪ್ರಾಂಶುಪಾಲರನ್ನು ಅಮಾನತು ಮಾಡಿ ತನಿಖಾ ವರದಿ ಬರುವವರೆಗೆ ಬೇರೆಯವರಿಗೆ ಅಧಿಕಾರ ನೀಡಿರುವುದು ವಿದ್ಯಾರ್ಥಿಗಳು ಹಾಗೂ ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಅಡುಗೆ ಸಿಬ್ಬಂದಿ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ, ಈ ಕುರಿತು ಜಿಲ್ಲಾಡಳಿತ ಕೂಲಂಕಷವಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ದಸರಾ ಹಬ್ಬದ ನಂತರ ಜಿಲ್ಲಾ ಅಲ್ಪಸಂಖ್ಯಾತರ ಜಿಲ್ಲಾಧಿಕಾರಿಗಳು ಶಾಲೆಯಲ್ಲಿ ಕಲಿಯುತ್ತಿರುವ ಎಲ್ಲ ಪಾಲಕರ ಸಭೆ ಕರೆಯಬೇಕು. ಹಾಗೂ ವಸತಿ ಶಾಲೆ ಸಮಸ್ಯೆಗಳ ಕುರಿತು ಗಂಭೀರ ಚಿಂತನೆ ಮಾಡಬೇಕೆಂದು ಆಗ್ರಹಿಸಿದರು.
ರಾಜು ಪಾಟೀಲ, ದಸ್ತಗೀರ್ ಜಮಾದಾರ್, ಶಿವಾನಂದ ನಾವಿ, ಸವಿತಾ ಪಾಟೀಲ, ಸದಸ್ತಗೀರ್ ಡಾಂಗೆ, ಮಾಬುಬಿ ಜಮಾದಾರ್ ಇತರರಿದ್ದರು