

ಭಟ್ಕಳ: ದೇವರನ್ನು ಧರ್ಮದ ನೆಲೆಯಲ್ಲಿ ಕಾಣಬೇಕೇ ಹೊರತು ಜಾತ್ಯತೀತ ನೆಲೆಯಲ್ಲಿ ಅಲ್ಲ. ದೇವರನ್ನು ಜಾತ್ಯತೀತ ನೆಲೆಯಲ್ಲಿ ಕಾಣುವ ಕುಹಕ ಬುದ್ಧಿ ಬಿಡಬೇಕು ಎಂದು ಗುರುಪುರದ ಶ್ರೀ ವಜ್ರದೇಹಿ ಮಠದ ಮಠಾಧೀಶ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಮುಟ್ಟಳ್ಳಿಯ ಪುರಾತನ ಕೇತಪೈ ನಾರಾಯಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದ ಧಾರ್ವಿುಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಪ್ರಸ್ತುತ ದೇವರನ್ನು ಜಾತ್ಯತೀತ ನೆಲೆಯಲ್ಲಿ ಕಾಣುವ ಪರಿಸ್ಥಿತಿ ಬಂದಿದ್ದು, ಇದು ಸರಿಯಲ್ಲ. ಹಿಂದು ಸಮಾಜ ಒಗ್ಗಟ್ಟಾಗಬೇಕು. ಜಾತಿಗಿಂತ ನೀತಿಗೆ ಪ್ರಾಮುಖ್ಯತೆ ಕೊಡಬೇಕು. ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ಕೊಟ್ಟು ಸಂಸ್ಕಾರವಂತರನ್ನಾಗಿ ಮಾಡಬೇಕು. ಕೇಂದ್ರ ಸರ್ಕಾರ ಪಾಶ್ಚಾತ್ಯ ಶಿಕ್ಷಣ ಪದ್ಧತಿ ಬದಲಾಯಿಸುವ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದೆ. ಆದರೂ ನಮ್ಮ ರಾಜ್ಯದಲ್ಲಿ ಇದು ಜಾರಿಯಾಗಲು ರಾಜ್ಯ ಸರ್ಕಾರ ಮುಂದಾಗದೇ ಇರುವುದು ಬೇಸರದ ಸಂಗತಿ ಎಂದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನಾವು ನಮ್ಮತನ ಮರೆಯಬಾರದು. ತ್ಯಾಗ-ಬಲಿದಾನಗಳಿಂದ ಸಂರಕ್ಷಿಸಿಕೊಂಡು ನಮ್ಮ ಆಚಾರ- ವಿಚಾರ, ಸಂಸೃ್ಕ ಅಸ್ಮಿತೆಗಳನ್ನು ಕಾಪಾಡಿಕೊಂಡು ಮಂದಿರ, ಮಠಮಾನ್ಯಗಳನ್ನು ಉಳಿಸಿಕೊಂಡು ಬಂದಿರುವುದು ಸಾಧಾರಣ ವಿಷಯವಲ್ಲ ಎಂದರು.
ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮಂಡಳದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾದ ಉಪಾಧ್ಯಕ್ಷ ಈಶ್ವರ ಎನ್. ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಾಯ ದೇವಡಿಗ, ಶ್ರೀಕಾಂತ ನಾಯ್ಕ, ಹಿಂದು ಜಾಗರಣ ವೇದಿಕೆಯ ಸಂಚಾಲಕ ಜಯಂತ್ ನಾಯ್ಕ, ನ್ಯಾಯವಾದಿ ರಾಜೇಶ ನಾಯ್ಕ, ಶಿರಾಲಿ ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ, ನಾಗೇಶ ಪೈ, ದೇವಸ್ಥಾನದ ಆಡಳಿತ ಸಮಿತಿಯ ವೆಂಕಟೇಶ ನಾಯ್ಕ, ಶ್ರೀನಿವಾಸ ನಾಯ್ಕ ಮುಂತಾದವರಿದ್ದರು. ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.